ಬೆಂಗಳೂರು, ಜೂ.3-ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಒಂದು ಕ್ವಿಂಟಾಲ್ಗೆ 87ರೂ. ನೀಡುತ್ತಿರುವ ಕಮೀಷನ್ ಜೊತೆಗೆ ಹೆಚ್ಚುವರಿಯಾಗಿ ರೂ.13ಗಳನ್ನು ನೀಡುವಂತೆ ಆದೇಶ ನೀಡಿದರೂ ಸಹ ಆಹಾರ ಇಲಾಖೆ ಇದುವರೆಗೂ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಿ.ಜಿ.ಶಿವನಂದಪ್ಪ ಮಾತನಾಡಿ, ಜೂನ್ನಿಂದ ಇಕೆವೈಸಿಯನ್ನು ಪ್ರಾರಂಭಿಸಿ ಒಬ್ಬ ವ್ಯಕ್ತಿಗೆ 5 ರೂ.ನಂತೆ ಆಹಾರ ಪಡಿತರ ಚೀಟಿಯಲ್ಲಿ ಎಷ್ಟು ಜನರಿದ್ದರೂ ಸರಿ ಅದಕ್ಕೆ 20ರೂ.ನಂತೆ ನೀಡುತ್ತಿರುವುದು ಸರಿಯಲ್ಲ. ಎಷ್ಟೇ ಜನರು ಬಂದರೂ ತಲಾ 5 ರೂ. ನೀಡುವಂತೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಸಗಟು ಮಳಿಗೆಗಳಿಂದ ನಮಗೆ ವಿತರಣೆಯಾಗುತ್ತಿರುವ ಬೇಳೆ ಗುಣಮಟ್ಟ ತೀವ್ರ ಕಳಪೆಯಾಗಿದ್ದು, ಪ್ಯಾಕಿಂಗ್ ಕೂಡ ಸರಿಯಾಗಿಲ್ಲದೆ ನಾವು ಮತ್ತೇ ಪ್ಯಾಕ್ ಮಾಡುವುದು ಕಷ್ಟವಾಗಿದೆ.ಅದಲ್ಲದೆ, ಗ್ರಾಹಕರಿಂದ ಅನಾವಶ್ಯಕವಾಗಿ ನಿಂದನೆಗೆ ಗುರಿಯಾಗುತ್ತಿದ್ದೇವೆ. ಆದ್ದರಿಂದ ಬೇಳೆಯನ್ನು ಕೊಡುವುದಾದರೆ ಗುಣಮಟ್ಟದ ಬೇಳೆ ಹಾಗೂ ಸರಿಯಾದ ಪ್ಯಾಕಿಂಗ್ ಇರುವುದನ್ನು ನೀಡಬೇಕು. ಇದರ ಜೊತೆಗೆ ಸಕ್ಕರೆ,ಗೋಧಿ, ತಾಳೆಎಣ್ಣೆ ನೀಡಿದರೆ ಗ್ರಾಹಕರಿಗೆ ಅನುಕೂಲ ವಾಗಲಿದೆ ಎಂದರು.
ಈಗ ವಿದ್ಯುತ್ ತೂಕ ಮಾಪನಯಂತ್ರ ಅಳವಡಿಸಿಕೊಂಡು ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದಾರೆ. ಆದರೆ ತೂಕ ಮಾಪನ ಯಂತ್ರಗಳು ಗುಣಮಟ್ಟ ಸರಿಯಿರುವುದಿಲ್ಲ. ಇದಕ್ಕೆ ರಿಪೇರಿ ಮಾಡಲು ಸಹ ಯಾವುದೇ ಕಂಪನಿಗಳು ಮುಂದೆ ಬರುತ್ತಿಲ್ಲ. ಆದ್ದರಿಂದ ನಾವೇ ಒಳ್ಳೆಯ ಕಂಪನಿಯ ವಿದ್ಯುತ್ ತೂಕ ಮಾಪನಯಂತ್ರಗಳನ್ನು ಕೊಂಡು ಆಹಾರ ವಿತರಣೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಬೆಂಗಳೂರು ಉತ್ತರ ವಲಯದಲ್ಲಿ 20 ಖಾಸಗಿ ನ್ಯಾಯಬೆಲೆ ಅಂಗಡಿಯನ್ನು ಏಕಾಏಕಿ ಸರ್ಕಾರ ಸಹಕಾರ ಸಂಘಗಳನ್ನಾಗಿ ಮಾಡುತ್ತಿರುವುದು ಕಾನೂನು ಬಾಹಿರ. ಆದ್ದರಿಂದ ಈ ಆದೇಶವನ್ನು ಹಿಂಪಡೆಯಬೇಕೆಂದರು.
ಸಂಘದ ಪದಾಧಿಕಾರಿಗಳು ಬಿ.ಎಂ.ಹಾಲಸ್ವಾಮಿ, ಕೃಷ್ಣನಾಯಕ್, ಎನ್.ಬಿ.ರಾಜು ಸೇರಿದಂತೆ ಮತ್ತಿತರರು ಇದ್ದರು.