ನವದೆಹಲಿ: 2020ರಲ್ಲಿ ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ ಆಡಳಿತ ಪಕ್ಷವಾದ ಆಮ್ ಆದ್ಮಿ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ರಾಜ್ಯದ ಮಹಿಳೆಯರು ದೆಹಲಿ ಮೆಟ್ರೋ, ಸಾರಿಗೆ ಹಾಗೂ ಕ್ಲಸ್ಟರ್ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಈ ಯೋಜನೆ ಘೋಷಿಸುವ ಸುಳಿವನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಶನಿವಾರ ನಡೆದ ಸಭೆಯಲ್ಲಿ ನೀಡಿದ್ದರು. ಇಂದು ಆ ಯೋಜನೆ ಘೋಷಿಸಿದ ಅವರು, ಮಹಿಳೆಯರ ಸುರಕ್ಷಿತ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿಕೊಳ್ಳುವ ಉದ್ದೇಶದೊಂದಿಗೆ ದೆಹಲಿ ಮೆಟ್ರೋ ಮತ್ತು ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು.
ಇದೇ ವೇಳೆ, ದೆಹಲಿ ಸರ್ಕಾರ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ಅವರಿಗೆ ಈ ಯೋಜನೆ ಸಂಬಂಧ ಆಗು-ಹೋಗುಗಳ ಕುರಿತು ಸಭೆ ನಡೆಸಿ, ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.
ಆದಾಗ್ಯೂ, ದೆಹಲಿ ಸಾರಿಗೆ ನಿಗಮ ಮತ್ತು ಕ್ಲಸ್ಟರ್ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿ ಕಷ್ಟವೇನು ಆಗುವುದಿಲ್ಲ. ಆದರೆ, ಮೆಟ್ರೋದಲ್ಲಿ ಉಚಿತ ಪ್ರಯಾಣ ಜಾರಿ ಸವಾಲಾಗಿದೆ. ಏಕೆಂದರೆ ಮೆಟ್ರೋದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.50 ಸಮಪಾಲು ಹೊಂದಿವೆ. ಈ ಹಿಂದೆ ಕೂಡ ಮೆಟ್ರೋ ದರ ಏರಿಕೆ ಮತ್ತು ನಾಲ್ಕನೆ ಹಂತ ವಿಸ್ತರಣೆ ಸಂಬಂಧ ಕೇಂದ್ರದ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ ಅನುಮತಿ ನೀಡಿರಲಿಲ್ಲ.