ಬೆಂಗಳೂರು, ಜೂ.3- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಗೊಳ್ಳಲಿರುವ ಗ್ರಾಮ ವಾಸ್ತವ್ಯದ ರೂಪುರೇಷೆ ಬಗ್ಗೆ ಇಂದು ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತಾವು ಕೈಗೊಳ್ಳಲಿರುವ ಗ್ರಾಮ ವಾಸ್ತವ್ಯದ ರೂಪುರೇಷೆ ಬಗ್ಗೆ ಚರ್ಚಿಸಿದರು.
ಕಳೆದ ಬಾರಿಗಿಂತ ಈ ಬಾರಿಯ ಗ್ರಾಮ ವಾಸ್ತವ್ಯ ಭಿನ್ನವಾಗಿರಲಿದ್ದು, ಸರ್ಕಾರಿ ಶಾಲೆಯಲ್ಲಿಯೇ ವಾಸ್ತವ್ಯ ಮಾಡಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ರೈತರ ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟು ಆಧುನಿಕ ಕೃಷಿ ಪದ್ಧತಿ, ಯಾಂತ್ರೀಕೃತ ಕೃಷಿಗೆ ನೆರವು ನೀಡುವುದು, ರೈತರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಗ್ರಾಮ ವಾಸ್ತವ್ಯ ಮಾಡುವ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡುವುದಲ್ಲದೆ ಸುತ್ತಮುತ್ತಲ ಗ್ರಾಮಗಳ ಜನರ ಸಮಸ್ಯೆಗಳನ್ನು ಆಲಿಸಿ ನೆರವು ನೀಡಲು ಪೂರಕವಾದ ಸಮಗ್ರ ವರದಿಯೊಂದನ್ನು ಸಿದ್ಧಪಡಿಸಲಿದ್ದಾರೆ.
ಸ್ಥಳದಲ್ಲೇ ಮುಖ್ಯಮಂತ್ರಿಗಳು ಸ್ಥಳೀಯ ಜನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು, ಇದರಿಂದ ರಾಜ್ಯಮಟ್ಟದಲ್ಲಿ ಕೈಗೊಳ್ಳುವ ನೀತಿ ನಿರೂಪಣೆಗೂ ಸಹಕಾರಿಯಾಗಲಿದೆ ಎಂಬ ಆಶಯವನ್ನು ಮುಖ್ಯಮಂತ್ರಿ ಹೊಂದಿದ್ದಾರೆ.
ವಾಸ್ತವ್ಯ ಹೂಡಲಿರುವ ಗ್ರಾಮ ಹಾಗೂ ಜಿಲ್ಲೆಗೆ ಯಾವ ಇಲಾಖೆಯ ಕೆಲಸಗಳು ಬಾಕಿ ಉಳಿದಿವೆ ಎಂಬುದನ್ನು ಮನಗಂಡು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂಬ ಮಹತ್ವದ ಉದ್ದೇಶವನ್ನು ಮುಖ್ಯಮಂತ್ರಿ ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಯಾವ ಜಿಲ್ಲೆಯ ಯಾವ ಊರಿನಿಂದ ಗ್ರಾಮ ವಾಸ್ತವ್ಯ ಪ್ರಾರಂಭಿಸಬೇಕು, ಅದರ ಸ್ವರೂಪ ಹೇಗಿರಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.