ನವದೆಹಲಿ: ಹಿಂದಿ ಭಾಷೆ ಕಡ್ಡಾಯ ನೀತಿಗೆ ಯೂಟರ್ನ್ ಹೊಡೆದಿರುವ ಕೇಂದ್ರ ಸರ್ಕಾರ ಹಿಂದಿ ಭಾಷೆ ಕೇವಲ ಆಯ್ಕೆಯಷ್ಟೆ. ಅದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಶೈಕ್ಷಣಿಕ ಪಠ್ಯದಲ್ಲಿ ತ್ರಿಭಾಷಾ ನೀತಿ ಕಲಿಕೆ ಕಡ್ಡಾಯ ಎಂಬ ಷರತ್ತನ್ನು ಹಿಂಪಡೆದಿದೆ.
ಹಿಂದಿ ಭಾಷಾ ಕಲಿಕೆ ಕಡ್ಡಾಯ ನೀತಿ ಬಗ್ಗೆ ರಾಷ್ಟ್ರಾದ್ಯಂತ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ 2019ನ್ನು ತಿದ್ದುಪಡಿಗೊಳಿಸಿದ್ದು, ತ್ರಿಭಾಷಾ ನೀತಿಯಲ್ಲಿ ಹಿಂದಿ ಭಾಷೆ ವಿದ್ಯಾರ್ಥಿಯ ಆಯ್ಕೆಯ ವಿಷಯವಾಗಿದೆ ಎಂದು ಹೇಳಿದೆ.
ಪ್ರಾದೇಶಿಕ ಭಾಷೆಗಳ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ತಾಣಗಳಲ್ಲಿ #StopHindiImposition ಎಂಬ ಅಭಿಯಾನ ನಡೆದಿತ್ತು.
ಕಸ್ತೂರಿ ರಂಗನ್ ಸಿದ್ಧಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2019ರಲ್ಲಿ ಇಂಗ್ಲಿಷ್ ಮತ್ತು ಹಿಂದಿ ಕಲಿಕೆ ಕಡ್ಡಾಯವಾಗಿತ್ತು. ಮತ್ತೊಂದು ಪ್ರದೇಶಿಕ ಭಾಷೆಗೆ ಸ್ಥಾನವನ್ನು ನೀಡಲಾಗಿತ್ತು. ಮೇ 31ರಂದು ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2019ರ ಡ್ರಾಫ್ಟ್ ಸಲ್ಲಿಕೆಯಾದ ನಂತರ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಪ್ರಾದೇಶಿಕ ಭಾಷೆ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲು ನೂತನ ಶಿಕ್ಷಣ ನೀತಿಯ ಡ್ರಾಫ್ಟ್ಅನ್ನು ಅಪ್ಲೋಡ್ ಮಾಡಿತ್ತು.
ಇದರ ಬೆನ್ನಲ್ಲೇ ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರದ ಧೋರಣೆ ವಿರುದ್ಧ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಅಲ್ಲದೇ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುಪ್ರತಿನಲ್ಲಿ ಪ್ರಸ್ತಾಪಿಸಿರುವ ಆಡ್-ಆನ್ ವೈಶಿಷ್ಟ್ಯದಲ್ಲಿನ ತ್ರಿಭಾಷಾ ಸೂತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದವು.ಇದು “ಹಿಂದಿ ಹೇರಿಕೆ”ಗೆ ಕೇಂದ್ರದ ಕುತಂತ್ರ ಎಂದು ಅವುಗಳು ಆರೋಪಿಸಿದ್ದವು.
ತಮಿಳುನಾಡು ಸರ್ಕಾರವು ದ್ವಿಭಾಷಾ ಸೂತ್ರವನ್ನು ಮುಂದುವರಿಸಲಿದೆ ಎಂದು ಹೇಳಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ತಮಿಳು ಭಾಷೆಯ ಸರಣಿ ಟ್ವೀಟ್ ಮಾಡಿದ್ದು “ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಅರ್ಥವೇನು?ಕೇಂದ್ರ ಸರ್ಕಾರ ಹಿಂದಿ ಕಡ್ಡಾಯ ಆಗಿಸಲು ಬಯಸುತ್ತಿದೆ, ಹಿಂದಿ ಭಾಷೆ ಕಡ್ಡಾಯ ವಿಷಯವಾಗಿದ್ದರೆ ಇದು ಅವರ ಹಿಂದಿ ಹೇರಿಕೆಯ ಸಾಕ್ಷಿಯಾಗಲಿದೆ” ಅವರು ಹೇಳಿದ್ದಾರೆ. ಅಲ್ಲದೆ “ಹಿಂದಿ ಹೇರಿಕೆಯ ಮೂಲಕ ಬಿಜೆಪಿ ಸರ್ಕಾರದ ನೈಜ ಮುಖ ಹೊರಹೊಮ್ಮುತ್ತಿದೆ” ಎಂದೂ ಚಿದಂಬರಂ ಹೇಳಿದ್ದರು.
ಪೂರ್ವ ಪ್ರಾಥಮಿಕ ಶಾಲೆಗಳಿಂದ 12ನೇ ತರಗತಿ ವರೆಗೆ ತ್ರಿಭಾಷಾ ಸೂತ್ರ ಅಳವಡಿಕೆ ಆಘಾತಕಾರಿಯಾಗಿದ್.ಇದು ದೇಶವನ್ನು ವಿಭಜಿಸುವ ಶಿಫಾರಸಾಗಲಿದೆ” ಎಂದು ಡಿಎಂಕೆ ಮುಖ್ಯ ಎಂಕೆ ಸ್ಟಾಲಿನ್ ಕೂಡ ಕಿಡಿಕಾರಿದ್ದರು.
ಅಂತಿಮವಾಗಿ ಕೇಂದ್ರ ಸರ್ಕಾರ ಯೂ ಟರ್ನ್ ಹೊಡೆದಿದ್ದು, ಹಿಂದಿ ಭಾಷೆ ಕಡ್ಡಾಯವಲ್ಲ, ವಿದ್ಯಾರ್ಥಿಗಳಿಗೆ ಇದು ಆಯ್ಕೆಯ ವಿಷಯ ಮಾತ್ರ ಎಂದು ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ತಿದ್ದುಪಡಿ ಮಾಡಿದೆ.
Centre`s U-turn: 3 language formula revised; Hindi made optional