
ಬ್ರಿಸ್ಟೋಲ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಘನತೆಗೆ ತಕ್ಕಂತೆ ಪ್ರದರ್ಶನ ತೋರಿದ್ದು, ಆಫ್ಘಾನಿಸ್ತಾನ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಫಿಂಚ್ ಬಳಗ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಆಫ್ಘಾನಿಸ್ತಾನ ನೀಡಿದ್ದ 208 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನೇ ಪಡೆಯಿತು. ಫಿಂಚ್-ವಾರ್ನರ್ ಜೋಡಿ ಉತ್ತಮ ಆರಂಭವನ್ನೇ ಒದಗಿಸಿತು. ಆಫ್ಘನ್ ಬೌಲರ್ ಗಳನ್ನು ಈ ಜೋಡಿ ಮನಬಂದಂತೆ ದಂಡಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ 16.2 ಓವರ್ ಗಳಲ್ಲಿ 96 ರನ್ ಗಳ ಜತೆಯಾಟವಾಡುವ ಉತ್ತಮ ಆರಂಭ ಒದಗಿಸಿತು. ನಾಯಕ ಫಿಂಚ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 66 ರನ್ ಬಾರಿಸಿ ಆಫ್ಘನ್ ನಾಯಕ ನೈಬ್ ಗೆ ವಿಕೆಟ್ ಒಪ್ಪಿಸಿದರು. ಇದಾದ ಕೆಲಹೊತ್ತಿನಲ್ಲೇ ಉಸ್ಮಾನ್ ಖವಾಜ ಕೂಡಾ ಪೆವಿಲಿಯನ್ ಸೇರಿದರು. ಖವಾಜ 15 ರನ್ ಬಾರಿಸಿ ರಶೀದ್ ಖಾನ್ ಗೆ ಬಲಿಯಾದರು. ಆ ಬಳಿಕ ಸ್ಮಿತ್ ಜತೆಗೆ ಇನಿಂಗ್ಸ್ ಮುಂದುವರೆಸಿದ ಡೇವಿಡ್ ವಾರ್ನರ್ ತಂಡವನ್ನು ಗೆಲುವಿನ ಡಡ ಸೇರಿಸಿದರು. ಗೆಲ್ಲಲು ಕೇವಲ ನಾಲ್ಕು ರನ್ ಗಳು ಬಾಕಿ ಇದ್ದಾಗ ಸ್ಮಿತ್ ಪೆವಿಲಿಯನ್ ಸೇರಿದರು. ಸಾಕಷ್ಟು ಎಚ್ಚರಿಕೆಯ ಆಟವಾಡಿದ ವಾರ್ನರ್ ಎಸೆತಗಳಲ್ಲಿ ಅಜೇಯ 89 ರನ್ ಬಾರಿಸಿದರು. ಡೇವಿಡ್ ವಾರ್ನರ್ ಅವರ ಸೊಗಸಾದ ಇನಿಂಗ್ಸ್ ನಲ್ಲಿ 8 ಬೌಂಡರಿಗಳು ಸೇರಿದ್ದವು. ಕೊನೆಯಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಮೊದಲ ಗೆಲುವು ತಂದಿತ್ತರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನದ ನಜೀಬುಲ್ಲಾ ಆಕರ್ಷಕ ಅರ್ಧಶತಕ, ರೆಹಮತ್ ಶಾ 43 ಬ್ಯಾಟಿಂಗ್ ನೆರವಿನಿಂದ 207 ರನ್ ಬಾರಿಸಿತ್ತು. ಪ್ಯಾಟ್ ಕಮ್ಮಿನ್ಸ್ ಹಾಗೂ ಆಡಂ ಜಂಪಾ ತಲಾ ಮೂರು ವಿಕೆಟ್ ಪಡೆದು ಗಮನ ಸೆಳೆದರು.