ಬೆಂಗಳೂರು, ಜೂ.2-ರಾಜ್ಯದ ಏಳು ಸ್ಥಳೀಯ ಸಂಸ್ಥೆಗಳ 140 ವಾರ್ಡ್ಗಳ ಮತ ಎಣಿಕೆ ನಾಳೆ ನಡೆಯಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ನೆಲಮಂಗಲ ಪುರಸಭೆಗಳು, ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ಮತ್ತು ಶಿಕಾರಿಪುರ ಪುರಸಭೆಗೆ ಈಗಾಗಲೇ ಮತದಾನ ನಡೆದಿದ್ದು, ನಾಳೆ ಮತ ಎಣಿಕೆ ನಡೆಯಲಿದೆ.
ಹಾಗೆಯೇ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಸೊರಬ, ಹೊಸನಗರ ಪಟ್ಟಣ ಪಂಚಾಯ್ತಿಗಳಿಗೂ ಚುನಾವಣೆ ನಡೆದಿದ್ದು, ನಾಳೆ ಫಲಿತಾಂಶ ಹೊರಬೀಳಲಿದೆ. ಈ ಏಳು ಸ್ಥಳೀಯ ಸಂಸ್ಥೆಗಳ ಮತ ಎಣಿಕೆಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ನಾಳೆ ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ನೆಲಮಂಗಲ ಪುರಸಭೆಯ 23 ವಾರ್ಡ್ಗಳ ಪೈಕಿ ಒಂದು ವಾರ್ಡ್ಗೆ ಅವಿರೋಧ ಆಯ್ಕೆಯಾಗಿದ್ದು, 22 ವಾರ್ಡ್ಗಳಿಗೆ ಶೇ.72.89ರಷ್ಟು ಮತದಾನ ನಡೆದಿದ್ದು, 87 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ಸೊರಬ ಪಟ್ಟಣ ಪಂಚಾಯ್ತಿಯ 12 ವಾರ್ಡ್ಗಳಿಗೆ ಶೇ.74.94ರಷ್ಟು ಮತದಾನವಾಗಿದ್ದು, 35 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ಏಳು ನಗರಸಭೆಗಳು, 30 ಪುರಸಭೆಗಳು, 19 ಪಟ್ಟಣಪಂಚಾಯ್ತಿಗಳು ಸೇರಿದಂತೆ ಒಟ್ಟು 56 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಶುಕ್ರವಾರ ಹೊರಬಿದ್ದಿದೆ. 1221ವಾರ್ಡ್ಗಳ ಪೈಕಿ 336 ಬಿಜೆಪಿ, 509 ಕಾಂಗ್ರೆಸ್, 174 ಜೆಡಿಎಸ್, ಬಿಎಸ್ಪಿ 3, ಸಿಪಿಐ(ಎಂ) 2, ಇತರೆ ಪಕ್ಷಗಳ 7 ಹಾಗೂ 160 ಸ್ವತಂತ್ರ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.