ಉಡುಪಿ: ಕೇಂದ್ರದಲ್ಲಿ ಬಹುಮತದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಗೋವು ರಕ್ಷಣೆಗೆ ಕಠಿಣ ಕಾನೂನು ತರಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ದೇಸಿ ಗೋವು ಸಮ್ಮೇಳನದಲ್ಲಿ ಮಾತನಾಡಿದ ಅವರು, ಗೋವಿನ ಹಾಲು ಕುಡಿದವರಿಗೆ ಗೋವು ತಾಯಿಯಾಗಿದ್ದು, ಗೋವನ್ನು ಕೊಲ್ಲುವವನು ಮಾನವನೇ ಅಲ್ಲ. ಗೋವು ಕೊಲ್ಲುವವನು ರಕ್ಕಸನ ಸಮಾನ. ಗೋಹತ್ಯೆ, ಗೋವು ಮಾಂಸ ಭಕ್ಷಣೆ ಹೇಯ ಕೃತ್ಯವಾಗಿದ್ದು, ಧಾರ್ಮಿಕ ದೃಷ್ಟಿಗಿಂತ, ಮಾನವೀಯ ದೃಷ್ಟಿಯಿಂದಾದರೂ ಗೋರಕ್ಷಣೆ ಮಾಡಬೇಕಿದೆ ಎಂದು ಮನವಿ ಮಾಡಿದರು.
ಹುಲಿ, ಸಿಂಹದ ಸಂತಾನ ಉಳಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಗೋವಿನ ತಳಿ ಉಳಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಹುಲಿ, ಸಿಂಹಕ್ಕಿಂತ ಗೋವು ಕೀಳಾಗಿ ಬಿಟ್ಟಿದೆ. ಗೋವು ಸಾಗಣೆ, ಕೊಲ್ಲುವ ವಿಧಾನ ಭಯಾನಕವಾಗಿದ್ದು, ಗೋವು, ಗೂಳಿಯ ರಕ್ಷಣೆಯೂ ಆಗಬೇಕು ಎಂದರು.