ಇಸ್ಲಾಮಾಬಾದ್: ರಮಜಾನ್ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿನ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪಾಕ್ನ ನೂರಾರು ಗಣ್ಯರಿಗೆ ಪ್ರಾಣ ಭೀತಿ ಒಡ್ಡಿದ್ದಲ್ಲದೆ, ನಾನಾ ಬಗೆಯ ಕಿರುಕುಳ ಕೊಟ್ಟು, ಅವಮಾನ ಮಾಡಿದ ಪಾಕ್ ಸೇನಾ ಸಿಬ್ಬಂದಿ ಅವರೆಲ್ಲರನ್ನೂ ವಾಪಸು ಕಳುಹಿಸಿದ ಘಟನೆ ನಡೆದಿದೆ.
ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಇಸ್ಲಾಮಾಬಾದ್ನ ಹೋಟೆಲ್ ಸೆರೆನಾದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರು. ಪಾಕಿಸ್ತಾನದ ಹಲವು ಗಣ್ಯ ವ್ಯಕ್ತಿಗಳು ಸೇರಿ ಸಹಸ್ರಾರು ಜನರನ್ನು ಕೂಟಕ್ಕೆ ಆಹ್ವಾನಿಸಿದ್ದರು. ಆಹ್ವಾನ ಮನ್ನಿಸಿ ದೊಡ್ಡ ಸಂಖ್ಯೆಯಲ್ಲಿ ಅತಿಥಿಗಳು ಆಗಮಿಸಿದ್ದರು.
ಆದರೆ, ಹೋಟೆಲ್ ಅನ್ನು ಸುತ್ತುವರಿದ ಪಾಕ್ ಸೇನಾಪಡೆ ಯೋಧರು ಇಫ್ತಾರ್ ಕೂಟಕ್ಕೆ ಆಗಮಿಸುತ್ತಿದ್ದ ಅತಿಥಿಗಳಿಗೆ ಪ್ರಾಣಭೀತಿ ಒಡ್ಡಿದ್ದಲ್ಲದೆ, ಮಾನಸಿಕ ಕಿರುಕುಳ ನೀಡಿದ್ದಾರೆ. ಅವರೆಲ್ಲರನ್ನೂ ಅವಮಾನಿಸಿ ಕೂಟದಲ್ಲಿ ಪಾಲ್ಗೊಳ್ಳದೆ ಹಾಗೆಯೇ ಹಿಂದಿರುಗುವಂತೆ ಮಾಡಿದ್ದಾಗಿ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ದೂರಿದ್ದಾರೆ.
ಯೋಧರು ಅಕ್ಷರಶಃ ಹೋಟೆಲ್ ಅನ್ನು ಸುತ್ತುವರಿದ್ದಿದ್ದರು. ನಂಬರ್ ಮರೆಮಾಚಿದ ಮೊಬೈಲ್ಫೋನ್ನಿಂದ ಕರೆ ಮಾಡಿ, ಅತಿಥಿಗಳನ್ನು ಹೊರಕರೆದು ಅವಮಾನಿಸಿದ್ದಾಗಿ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಆರೋಪಿಸಿದ್ದಾರೆ.