ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ತೀರ್ಪು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಬಂದ ವಿಚಾರ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲಿಗೆ ನಾವು ಕಾರಣರಲ್ಲ. ಎಚ್ಡಿಕೆ ಅವರ ಸ್ವಯಂಕೃತ ಅಪರಾಧದಿಂದ ನಿಖಿಲ್ಗೆ ಸೋಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ನಿಖಿಲ್ ಸೋಲಿಗೆ ಕಾಂಗ್ರೆಸ್ ಅವರೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಈ ಮಂಡ್ಯ ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. “ಈ ಚುನಾವಣೆಯಲ್ಲಿ ನಾವು ತಟಸ್ಥವಾಗಿದ್ದೆವು. ಜನ ಪಕ್ಷೇತರ ಅಭ್ಯರ್ಥಿ ಬೇಕು ಎಂದು ಮತ ಹಾಕಿದ್ದಾರೆ. ಈ ಸೋಲಿಗೆ ನಾವು ಹೊಣೆ ಅಲ್ಲ. ಜೆಡಿಎಸ್ನವರು ಇದರ ಸಂಪೂರ್ಣ ಹೊಣೆ ಹೊರಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಯಂಕೃತ ಅಪರಾಧದಿಂದ ನಿಖಿಲ್ ಸೋತರು,” ಎಂದು ಅವರು ಹೇಳಿದ್ದಾರೆ.
ಚುನಾವಣೆ ವೇಳೆ ಪ್ರಚಾರಕ್ಕೆ ಬನ್ನಿ ಎಂದು ಯಾರೊಬ್ಬರೂ ನನ್ನನ್ನು ಕರೆದಿಲ್ಲ ಎನ್ನುವ ರವಿಕುಮಾರ್, “ಈ ಚುನಾವಣೆಯಲ್ಲಿ ಯಾರು ಜೆಡಿಎಸ್ ಪರ ಪ್ರಚಾರಕ್ಕೆ ಬನ್ನಿ ಎಂದು ನನ್ನನ್ನು ಕರೆಯಲಿಲ್ಲ. ನನಗೆ ಟಾಂಗ್ ಕೊಡಬೇಕು ಎನ್ನುವ ಉದ್ದೇಶದಿಂದ ಬೇರೆ ಕಾಂಗ್ರೆಸ್ ಮುಖಂಡರನ್ನು ಪ್ರಚಾರಕ್ಕೆ ಕರೆದೊಯ್ದಿದ್ದಾರೆ. ಉಪಚುನಾವಣೆಯಲ್ಲಿ ಶಿವರಾಮೇಗೌಡರು ನಮ್ಮ ಬಳಿ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು. ಅಂತೆಯೇ ನಾವು ಅವರಿಗೆ ಪ್ರಚಾರ ಮಾಡಿಕೊಟ್ಟಿದ್ದೇವೆ,” ಎಂದು ರವಿಕುಮಾರ್ ಹೇಳಿದ್ದಾರೆ.
“ಮಂಡ್ಯದಲ್ಲಿ ಹಾಲಿ ಶಾಸಕ ಎಂ.ಶ್ರೀನಿವಾಸ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮುಸ್ಲಿಂ ವಾರ್ಡ್ಗಳಲ್ಲಿ ಮೂಲಭೂತ ಸಮಸ್ಯೆಗಳು ಅಧಿಕವಾಗಿದೆ.
ಅದಕ್ಕೆ ಅನುದಾನ ಬಿಡುಗಡೆ ಆಗಿದ್ದರೂ ಹಣ ನೀಡುತ್ತಿಲ್ಲ. ಶಾಸಕರ ತಾರತಮ್ಯ ನೀತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ,” ಎಂದು ಅವರು ಹೇಳಿದರು.