ಬೆಂಗಳೂರು : ಮೆಜೆಸ್ಟಿಕ್ನಲ್ಲಿ ಪತ್ತೆಯಾದ ಗ್ರೆನೇಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೊಸದಾಗಿ ಬಂದ ಮಹಿಳಾ ಅಧಿಕಾರಿಯನ್ನು ಕಟ್ಟಿ ಹಾಕಲು ಈ ರೀತಿ ಸಂಚು ನಡೆದಿತ್ತು ಎನ್ನುವ ವಿಚಾರ ರೈಲ್ವೇ ಉನ್ನತ್ತ ಮೂಲಗಳಿಂದ ಲಭ್ಯವಾಗಿದೆ.
ಶುಕ್ರವಾರ ಬೆಳಗ್ಗೆ ಕಂಟ್ರಿಮೇಡ್ ಗ್ರೆನೇಡ್ ದೊರೆತಿತ್ತು. ಇದು ನಕಲಿ ಎಂದು ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿತ್ತು. ಆದರೆ, ಗ್ರೆನೇಡ್ ಇಡಲಾದ ಹಿಂದಿನ ಉದ್ದೇಶ ಬೆರೇಯೇ ಇತ್ತು ಎನ್ನಲಾಗಿದೆ. 3 ತಿಂಗಳ ಹಿಂದೆಯಷ್ಟೇ ದೇಬಾ ಸ್ಮಿತಾ ಚಟ್ಟೋಪಾಧ್ಯಾಯ ಬ್ಯಾನರ್ಜಿ ಆರ್ಪಿಎಫ್ನ ಡಿವಿಶನ್ ಸೆಕ್ಯುರಿಟಿ ಕಮಿಷನರ್ ಅಧಿಕಾರ ವಹಿಸಿಕೊಂಡಿದ್ದರು. ದೇಬಾ ಸ್ಮಿತಾಗೆ ಕಪ್ಪುಚುಕ್ಕೆ ತರಲು ಆರ್ಪಿಎಫ್ ಸಿಬ್ಬಂದಿಯಿಂದಲೇ ಗ್ರೆನೇಡ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
ರೈಲ್ವೇ ಇಲಾಖೆಯಲ್ಲಿ ಹೀಗೊಂದು ಮಾತು ಕೇಳಿಬರುತ್ತಿದೆ. ಬಾಂಬ್ ಪತ್ತೆಯಾದ ವೇಳೆ ಸಿಸಿಟಿವಿ ಪರೀಕ್ಷಿಸಿದಾಗ ಅದು ಆಫ್ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ಹಾಗಾಗಿ, ಸಿಬ್ಬಂದಿಯೇ ಸಿಸಿಟಿವಿ ಆಫ್ ಮಾಡಿದ್ದರು ಎನ್ನುವ ಅನುಮಾನ ಮೂಡಿದೆ.
ಶುಕ್ರವಾರ ಬೆಳಗ್ಗೆಯೇ ಪೊಲೀಸ್ ಇಲಾಖೆಗೆ ಅನಾಮಿಕ ಕರೆ ಬಂದಿತ್ತು. ಈ ಕರೆಯಲ್ಲಿ ಬೆಂಗಳೂರಿನಿಂದ ಪಾಟ್ನಾ ತೆರಳುವ ಸಂಘಮಿತ್ರ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ತಕ್ಷಣವೇ ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಿ ತಪಾಸಣೆ ನಡೆಸಿದ್ದರು. ಈ ವೇಳೆ ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ 1 ರ ರೈಲ್ವೆ ಹಳಿಯ ಮೇಲೆ ಕಂಟ್ರಿಮೇಡ್ ಗ್ರೆನೇಡ್ ಪತ್ತೆಯಾಗಿತ್ತು. ಇದರ ಜೊತೆಗೆ ರೈಲಿನಲ್ಲಿ ಕೆಲ ಅನುಮಾನಾಸ್ಪದ ವಸ್ತುಗಳು ಸಹ ಪತ್ತೆಯಾಗಿದ್ದವು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಂತರ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಫೋಟಕ ವಸ್ತುವನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಿ ಸ್ಫೋಟಕದ ಮಾದರಿಯ ಕುರಿತು ಪರಿಶೀಲನೆ ನಡೆಸಿದ್ದರು. ಈ ವೇಳೆ ಅದು ನಕಲಿ ಬಾಂಬ್ ಎಂದು ತಿಳಿದು ಬಂದಿತ್ತು. ಈ ವೇಳೆ ಗೃಹಸಚಿವ ಎಂ.ಬಿ. ಪಾಟೀಲ್ ಸ್ಥಳಕ್ಕೆ ಆಗಮಿಸಿ ಪೊಲೀಸರಿಂದ ಸಂಪೂರ್ಣ ಮಾಹಿತಿ ಪಡೆದಿದ್ದರು.