ಬೆಂಗಳೂರು, ಜೂ.2-ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರ ಮನವೊಲಿಕೆಗೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿರುವುದಕ್ಕೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟದಿಂದ ಕೈಬಿಟ್ಟ ನಂತರ ರಮೇಶ್ ಜಾರಕಿ ಹೊಳಿ ಬಂಡಾಯವೆದ್ದಿದ್ದು, ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಪಣತೊಟ್ಟು ಕಾರ್ಯಾಚರಣೆಗಿಳಿದಿದ್ದಾರೆ.
ಅವರ ಮನವೊಲಿಸಲು ಆರಂಭದಲ್ಲಿ ಕಾಂಗ್ರೆಸ್ ನಾಯಕರು ಪ್ರಯತ್ನಿಸಿದರು. ಆದರೆ ಅದು ಯಶಸ್ವಿಯಾಗಲಿಲ್ಲ. ಕೊನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಖುದ್ದಾಗಿ ಅಖಾಡಕ್ಕಿಳಿದರು.
ರಮೇಶ್ ಜಾರಕಿ ಹೊಳಿ ಆಪ್ತರಾಗಿರುವ ಮಹೇಶ್ ಕುಮಟಳ್ಳಿ ಮೂಲಕ ಸಂಧಾನದ ಮಾತುಕತೆ ಮುಂದುವರೆಸಿದರು. ಆದರೆ ಯಾವುದಕ್ಕೂ ಜಗ್ಗದ ರಮೇಶ್ ಜಾರಕಿ ಹೊಳಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಶತಸಿದ್ಧ.ಬಿಜೆಪಿ ಸೇರಿ ಸರ್ಕಾರವನ್ನು ಪತನಗೊಳಿಸುತ್ತೇನೆ ಎಂದು ಹಠ ಹಿಡಿದಿದ್ದಾರೆ.ಮನವೊಲಿಸಿ ಸಾಕಾಗಿದೆ ಎಂದು ಕುಮಾರಸ್ವಾಮಿ ಸಿದ್ದರಾಮಯ್ಯ ಅವರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿ ಇಬ್ಬರೂ ನಾಯಕರು ಭೇಟಿಯಾಗಿದ್ದರು. ಈ ವೇಳೆ ಆಪರೇಷನ್ ಕಮಲ, ಅತೃಪ್ತ ಶಾಸಕರ ನಡವಳಿಕೆಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.ರಮೇಶ ಜಾರಕಿ ಹೊಳಿ ವಿಷಯ ಬಂದಾಗ ಇಬ್ಬರೂ ನಾಯಕರು ಅಸಮಾಧಾನ ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ನಾನೂ ಕೂಡ ಅವರೊಂದಿಗೆ ಮಾತನಾಡಿದೆ. ಯಾವಾಗ ಕೇಳಿದರೂ ಸಚಿವ ಸ್ಥಾನ ಕೊಡಲು ಕಾಂಗ್ರೆಸ್ ಸಿದ್ಧ ಇದೆ. ಆದರೆ ರಮೇಶ್ ಜಾರಕಿ ಹೊಳಿ ಸಮಸ್ಯೆಯೇ ಬೇರೆ.ಅವರನ್ನು ಮನವೊಲಿಸುವ ಪ್ರಯತ್ನ ಫಲ ನೀಡುವುದಿಲ್ಲ ಎಂದೆನಿಸುತ್ತಿದೆ. ಹಾಗಾಗಿ ಇತರ ಅಸಮಾಧಾನಿತ ಶಾಸಕರನ್ನು ಸಮಾಧಾನ ಪಡಿಸಲು ಹೆಚ್ಚಿನ ಒತ್ತು ನೀಡೋಣ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಬ್ಬರೂ ನಾಯಕರು ಗಂಭೀರ ಚರ್ಚೆ ನಡೆಸಿದ್ದು, ಸಂಪುಟ ವಿಸ್ತರಣೆಗೆ ಸೂಕ್ತ ದಿನಾಂಕ ನಿಗದಿಪಡಿಸಿದ್ದಾರೆ ಎಂದು ಹೇಳಲಾಗಿದೆ.