ಬೆಂಗಳೂರು, ಜೂ.2-ಸಂಪುಟ ಪುನಾರಚನೆಗೆ ಬ್ರೇಕ್ ಹಾಕಿ ಕೇವಲ ಸಂಪುಟ ವಿಸ್ತರಣೆಗಷ್ಟೇ ಮುಂದಾಗಿರುವ ಕಾಂಗ್ರೆಸ್ ನಿರ್ಧಾರ ಸಮ್ಮಿಶ್ರ ಸರ್ಕಾರಕ್ಕೆ ಕಂಟಕಕ್ಕೆ ತಂದೊಡ್ಡಲಿದೆಯೇ ಎಂಬ ಚರ್ಚೆಗಳು ಆರಂಭಗೊಂಡಿವೆ.
ಕಾಂಗ್ರೆಸ್ನಲ್ಲಿ ಸುಮಾರು 15 ರಿಂದ 16 ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಹಿರಿಯ ಶಾಸಕರೂ ಇದ್ದಾರೆ. ಆದರೆ ಅವರೆಲ್ಲರನ್ನೂ ಕಡೆಗಣಿಸಿ ಕೇವಲ ಪಕ್ಷೇತರರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇದು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳ ಅಸಹನೆಯನ್ನು ಹೆಚ್ಚಿಸಿದೆ.
ಆಪರೇಷನ್ ಕಮಲಕ್ಕೆ ಸ್ವಲ್ಪ ಹಿನ್ನಡೆಯಾಗಿದ್ದು, ಬಿಜೆಪಿ ಸದ್ಯಕ್ಕೆ ಸರ್ಕಾರ ಪತನಗೊಳಿಸುವ ಚಟುವಟಿಕೆಗಳಿಂದ ತಟಸ್ಥವಾಗಿದ್ದಂತೆ ಕಂಡುಬರುತ್ತಿದೆ. ಆದರೆ ವಾಸ್ತವದಲ್ಲಿ ಒಳಗೊಳಗೆ ಚರ್ಚೆಗಳು, ಸಂಧಾನಗಳು ನಡೆಯುತ್ತಲೇ ಇವೆ.
ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸದೆ ಇರುವುದರಿಂದ ರಾಜ್ಯ ನಾಯಕರು ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಕಾರ್ಯಾಚರಣೆಯನ್ನು ಕೆಲ ಕಾಲ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೇ ನಂಬಿಕೊಂಡಿರುವ ಕಾಂಗ್ರೆಸ್ ನಮ್ಮ ಶಾಸಕರ್ಯಾರೂ ಬಿಜೆಪಿಗೆ ಹೋಗುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ.
ಕಾಂಗ್ರೆಸ್ ಶಾಸಕರ ಮನಸ್ಥಿತಿಯನ್ನು ಅರ್ಥೈಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಸಂಪುಟ ಪುನಾರಚನೆ ಮಾಡಿ, ಕೆಲವರನ್ನು ಕೈಬಿಟ್ಟು, ಅತೃಪ್ತರಿಗೆ ಅವಕಾಶ ನೀಡಿ ಸರ್ಕಾರವನ್ನು ಕಾಪಾಡಿಕೊಳ್ಳಬೇಕು ಎಂಬ ಉಮೇದಿನಲ್ಲಿದ್ದರು.ಆದರೆ ಅದಕ್ಕೆ ಕಾಂಗ್ರೆಸ್ನಿಂದಲೇ ವಿರೋಧ ವ್ಯಕ್ತವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನಾರಚನೆಯಾದರೆ ತಮ್ಮ ಬೆಂಬಲಿಗರನ್ನು ಕೈಬಿಡುವ ಸಾಧ್ಯತೆಗಳಿರುವುದರಿಂದ ಸಂಪುಟ ಪುನಾಚರನೆ ಬೇಡ, ವಿಸ್ತರಣೆ ಸಾಕು ಎಂದು ಹೇಳುತ್ತಿದ್ದಾರೆ.
ಒಂದು ವೇಳೆ ಆಕಾಂಕ್ಷಿಗಳು ರೊಚ್ಚಿಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋದರೆ ಸಮ್ಮಿಶ್ರ ಸರ್ಕಾರ ಅತಂತ್ರಕ್ಕೆ ಸಿಲುಕುತ್ತದೆ.ಸಂದರ್ಭದ ಲಾಭ ಪಡೆದು ಬಿಜೆಪಿ ಸರ್ಕಾರ ರಚಿಸಬಹುದು. ಆಗ ಸಹಜವಾಗಿ ವಿರೋಧ ಪಕ್ಷದ ನಾಯಕತ್ವ ಸಿದ್ದರಾಮಯ್ಯ ಅವರಿಗೆ ದೊರೆಯಬಹುದು. ಹೀಗಾಗಿ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರ ಮಾತೇ ಅಂತಿಮವಾಗಿದ್ದು, ಹೈಕಮಾಂಡ್ ಕೂಡ ಮೂಗು ತೂರಿಸಲು ನಿರಾಕರಿಸುತ್ತಿದೆ.ಕಾಂಗ್ರೆಸ್ ನಾಯಕರ ಈ ನಡವಳಿಕೆ ಕುಮಾರಸ್ವಾಮಿಯವರ ಅಸಹನೆಗೆ ಕಾರಣವಾಗಿದ್ದು, ಏನಾದರೂ ಆಗಲಿ ಪರಿಸ್ಥಿತಿ ಬಂದಂತೆ ಎದುರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಹೀಗಾಗಿ ಕುಮಾರಸ್ವಾಮಿಯವರು ಆಪರೇಷನ್ ಕಮಲ, ದೋಸ್ತಿ ಪಕ್ಷಗಳ ರಾಜಕೀಯಕ್ಕೆ ತಲೆ ಕೆಡಿಸಿಕೊಳ್ಳದೆ ಗ್ರಾಮ ವಾಸ್ತವ್ಯದತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.