ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಯಲ್ಲಿ ಚಿನ್ನದ ಸಮಯ ತುರ್ತು ಸೇವಾಕೇಂದ್ರ ಪ್ರಾರಂಭ

ಬೆಂಗಳೂರು, ಜೂ.2- ರಾಜರಾಜೇಶ್ವರಿ ನಗರದಲ್ಲಿರುವ ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಳ ನಿರ್ವಹಣೆಗೆ ಅಗತ್ಯವಾದ ವೈದ್ಯಕೀಯ ಸೌಕರ್ಯ ಹಾಗೂ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ತಿಳಿಸಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪುವವರಲ್ಲಿ ಅತಿಯಾದ ರಕ್ತಸ್ರಾವವಾಗುವುದು ಮುಖ್ಯ ಕಾರಣ. ಹಾಗಾಗಿ ನಮ್ಮ ಆಸ್ಪತ್ರೆಯಲ್ಲಿ ಚಿನ್ನದ ಸಮಯ (ಗೋಲ್ಡನ್ ಅವರ್ಸ್) ತುರ್ತು ಸೇವಾ ಕೇಂದ್ರವನ್ನು ಪ್ರಾರಂಬಿಸಿದ್ದು, ಇದು ಒಂದು ಸಾಮಾಜಿಕ ಉಪಕ್ರಮವಾಗಿದೆ ಎಂದಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಒಂದು ಗಂಟೆಯೊಳಗೆ ಚಿನ್ನದ ಸಮಯದಲ್ಲಿ ಆಸ್ಪತ್ರೆಗೆ ಕರೆತಂದರೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಬದುಕಿಸಿಕೊಳ್ಳುವ ಅವಕಾಶವಿರುತ್ತದೆ ಎಂದು ಅವರು ಹೇಳಿದರು.

ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತುರ್ತು ವಿಭಾಗ ಹಾಗೂ ಲೆವಲ್ 1 ಥರೋಮಾ ಕೇಂದ್ರವನ್ನು ಚಿನ್ನದ ಸಮಯದ ನೋಡಲ್ ಕೇಂದ್ರವೆಂದು ಘೋಷಿಸಿದ್ದು, ಇದು ಬೆಂಗಳೂರು ದಕ್ಷಿಣ ಭಾಗದ ಏಕೈಕ ತುರ್ತು ನೋಡಲ್ ಕೇಂದ್ರವಾಗಿದೆ.

ಈ ವಿಶೇಷ ತುರ್ತು ಸೇವಾ ಕೇಂದ್ರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‍ಕುಮಾರ್ ಉದ್ಘಾಟಿಸಿದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿಯ ವರದಿ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಸ್ತೆ ಅಪಘಾತದ ಸಾವು ಪಟ್ಟಿಯಲ್ಲಿ ಟಾಪ್ 10 ನಗರಗಳ ಲಿಸ್ಟ್ ಸಿದ್ಧಪಡಿಸಿದೆ. ಇದರಲ್ಲಿ ಬೆಂಗಳೂರು ಮಹಾನಗರ ಕೂಡ ಇದೆ.ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಕನಿಷ್ಠ ಒಂದು ಸಾವು ಸಂಭವಿಸುತ್ತಿದೆ ಎಂದು ಈ ವರದಿ ತಿಳಿಸುತ್ತದೆ.

ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಯ ಸಮೂಹದ ಸಿಇಒ ಕರ್ನಲ್ ಹೇಮರಾಜ್ ಸಿಂಗ್ ಪರ್ಮಾರ್ ಮಾತನಾಡಿ, ಜನರಲ್ಲಿ ಜವಾಬ್ದಾರಿ ಹೆಚ್ಚಿಸಲು ಮತ್ತು ಜೀವ ರಕ್ಷಕರಾಗುವಲ್ಲಿ ಸಹಾಯ ಮಾಡಲು ನಮ್ಮ ಆಸ್ಪತ್ರೆ ಯಾವಾಗಲೂ ವಿಶೇಷ ಕಾಳಜಿ ತೋರಿಸುತ್ತದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ