ಬಂಜಾರ ಸಮುದಾಯದವರಿಗೆ ಸರಿಯಾದ ಮೀಸಲಾತಿ ದೊರೆಯುತ್ತಿಲ್ಲ

ಬೆಂಗಳೂರು, ಜೂ.2- ಕಡಿಮೆ ಜನಸಂಖ್ಯೆ ಹೊಂದಿರುವ ಮೇಲ್ವರ್ಗದವರಿಗೆ ಹಕ್ಕು ಮತ್ತು ಅಧಿಕಾರ ದೊರೆಯುತ್ತಿದೆ. ಬಂಜಾರ ಸಮುದಾಯದವರು ದೇಶದಲ್ಲಿ 10 ಕೋಟಿ ಜನಸಂಖ್ಯೆ ಹೊಂದಿದ್ದರೂ, ನಮ್ಮ ಹಕ್ಕಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ತೆಲಂಗಾಣ ಬಂಜಾರ ಹಕ್ಕು ಸಮಿತಿ ಅಧ್ಯಕ್ಷ ದಾಸರಾಮ್ ನಾಯ್ಕ್ ಹೇಳಿದರು.

ನಗರದ ಕೆಇಬಿ ಸಭಾಂಗಣದಲ್ಲಿ ರಾಷ್ಟ್ರೀಯ ಗೋರ್ ಬಂಜಾರ ಸೇನಾ ಹಾಗೂ ಗೋರೂರ್ ಸೇವಾ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಗೋರ್-ಬಂಜಾರ ವಧು-ವರರ ಪರಿಚಯ ಅನ್ವೇಷಣೆ ಮತ್ತು ಗೋರೂರ್ ಸೇವಾ ಫೌಂಡೇಷನ್ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದೇಶದಲ್ಲಿ 10 ಕೋಟಿ ಬಂಜಾರ ಸಮುದಾಯದವರಿದ್ದರೂ, ಸರಿಯಾದ ಮೀಸಲಾತಿ ದೊರೆಯುತ್ತಿಲ್ಲ. ದೇಶದ ಎಲ್ಲ ರಾಜ್ಯದಲ್ಲಿ ಒಂದೊಂದು ರೀತಿಯ ಮೀಸಲಾತಿ ನೀಡಲಾಗಿದೆ.ದೇಶದ 7 ರಾಜ್ಯದಲ್ಲಿ ಎಸ್‍ಸಿ, 7 ರಾಜ್ಯದಲ್ಲಿ ಎಸ್‍ಟಿ, 4 ರಾಜ್ಯದಲ್ಲಿ ಒಬಿಸಿ ಎಂದು ಪರಿಗಣಿಸಲಾಗುತ್ತಿದ್ದು, ಶಿಕ್ಷಣ, ಉದ್ಯೋಗದಲ್ಲಿ ವಂಚಿತರಾಗುತ್ತಿದ್ದೇವೆ. ಆದ್ದರಿಂದ ಬಂಜಾರ ಸಮುದಾಯವನ್ನು ಒಂದೇ ಪಂಗಡಕ್ಕೆ ಸೇರಿಸಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಮಾಜದಲ್ಲಿ ನಮ್ಮ ಜನಾಂಗದವರಿಗೆ ಕಳ್ಳರು, ವಲಸೆ ಹೋಗುವರು, ಉದ್ಯೋಗ ಹೀನರು ಎಂಬಿತ್ಯಾದಿ ಅರ್ಥ ಕಲ್ಪಿಸಿದ್ದಾರೆ.ಇದು ಬದಲಾಗಬೇಕಾದರೆ ಹೆಚ್ಚಿನ ಮೀಸಲಾತಿ, ಅಧಿಕಾರ ನೀಡಬೇಕು. ಕರ್ನಾಟಕದಲ್ಲಿ ನಮ್ಮ ಸಮುದಾಯಕ್ಕೆ ಸ್ಥಾನಮಾನ ನೀಡಲಾಗಿದೆಯೇ ಹೊರತು ಅಧಿಕಾರ ನೀಡಿಲ್ಲ. ಇನ್ನು ಕೆಲ ರಾಜ್ಯದಲ್ಲಿ ಸ್ಥಾನಮಾನವನ್ನೇ ನೀಡಿಲ್ಲ. ಆದ್ದರಿಂದ ಸಮುದಾಯದ ಎಲ್ಲ ಪಂಗಡಗಳೂ ಸೇರಿ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.

ಬಂಜಾರ ಸಮುದಾಯ ವಿಶೇಷವಾದ ಸಂಸ್ಕøತಿ ಹೊಂದಿದ್ದು, 3 ಸಾವಿರ ವರ್ಷಗಳ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ವಿಚ್ಛೇದನ ಹೆಚ್ಚಾಗುತ್ತಿದ್ದು, ಗಂಡು -ಹೆಣ್ಣು ಪರಸ್ಪರ ನೇರ ಭೇಟಿ, ವಿಷಯ ಹಂಚಿಕೆಯಿಂದ ತಮ್ಮ ವೈವಾಹಿಕ ಜೀವನ ಚೆನ್ನಾಗಿ ನಡೆಸಲು ಅನುಕೂಲವಾಗುವಂತೆ ವಧು-ವರರ ಸಮಾವೇಶ ಏರ್ಪಡಿಸಲಾಗಿದೆ ಎಂದರು.

ಇದೇ ವೇಳೆ ಬಾಮಸೆಫ್ ರಾಜ್ಯಾಧ್ಯಕ್ಷ ಎಸ್.ಜಿ. ಶೀಲವಂತ ಅವರು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ರಾಷ್ಟ್ರೀಯ ಅಲೆಮಾರಿ ಜನಜಾತಿ ಮೋರ್ಚಾ ಪರಿಚಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಸಾಲೂರು ಮಠದ ಶ್ರೀ ಸೈನಾಭಗತ್ ಸ್ವಾಮೀಜಿ, ಗೋರೂರ್ ಸೇವಾ ಫೌಂಡೇಷನ್ ಟ್ರ¸್ಟï ರಾಜ್ಯಾಧ್ಯಕ್ಷ ಕೆ.ಡಿ.ನಾಯ್ಕ್, ಉಪಾಧ್ಯಕ್ಷ ಹರಿದಾಸ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಹನುಮಂತ ನಾಯ್ಕ್, ಕಿರುತರೆ ನಟ ಎ.ಆರ್.ಗೋವಿಂದಸ್ವಾಮಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ