ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸೋಲನ್ನನುಭವಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ನೂತನ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.
ಸೋನಿಯಾ ಗಾಂಧಿ ಅವರ ಹೆಸರನ್ನು ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡುವ ತಮ್ಮ ನಿರ್ಧಾರದಿಂದ ಹಿಂದೆಸರಿಯಲು ನಿರಾಕರಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರ ಆಯ್ಕೆ ನಡೆದಿದೆ.
ಇದುವರೆಗೂ ಸಂಸದೀಯ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಒಂಬತ್ತು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದರು.
ಆದರೆ ಈಗ ಅವರು ಕೂಡ ಅಪಜಯ ಅನುಭವಿಸಿದ್ದರಿಂದ, ಈ ಸ್ಥಾನಕ್ಕೆ ಬೇರೊಬ್ಬರ ಆಯ್ಕೆ ಅನಿವಾರ್ಯವಾಗಿತ್ತು.
ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗಳಿಸಿಕೊಂಡಿತ್ತು. 2014ರಲ್ಲಿ 44 ಸ್ಥಾನಗಳಿಸಲಷ್ಟೇ ಅದು ತೃಪ್ತಿಪಟ್ಟುಕೊಂಡಿತ್ತು. ಅಧಿಕೃತ ಪ್ರತಿಪಕ್ಷವೆನಿಸಲು 55 ಸ್ಥಾನಗಳು ಅಗತ್ಯವಾಗಿದ್ದು, ಕಾಂಗ್ರೆಸ್ ಬಳಿ ಕೇವಲ 52 ಸ್ಥಾನಗಳಿವೆ.
ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿ, ಸೋನಿಯಾ ಗಾಂಧಿ ಅವರನ್ನು ನೂತನ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯಿಟ್ಟು ಮತ ನೀಡಿದ್ದಕ್ಕಾಗಿ 12.13 ಕೋಟಿ ಮತದಾರರಿಗೆ ಸೋನಿಯಾ ಗಾಂಧಿ ಧನ್ಯವಾದಗಳನ್ನು ಅರ್ಪಿಸಿರುವುದಾಗಿ ತಿಳಿಸಿದ್ದಾರೆ.
Sonia Gandhi elected as the leader of Congress Parliamentary party