ಬೆಂಗಳೂರು, ಜೂ.1- ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಹಿರಿಯ ಕಾಂಗ್ರೆಸಿಗ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದು, ಬಹಳಷ್ಟು ನಾಯಕರಲ್ಲಿ ಕಿರಿಕಿರಿಯಾಗಲಾರಂಭಿಸಿದೆ.
ಸುಮಾರು 2008ರಿಂದ ರಾಷ್ಟ್ರ ರಾಜಕಾರಣದಲ್ಲಿದ್ದ ಖರ್ಗೆಯವರು ರಾಜ್ಯ ರಾಜಕಾರಣದತ್ತ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವುದರಿಂದ ಅವರು ಮತ್ತೆ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದಾರೆ.
ಕಾಂಗ್ರೆಸ್ನ ಹೀನಾಯ ಸೋಲಿಗೆ ರಾಜ್ಯದ ಕೆಲ ನಾಯಕರ ನಡವಳಿಕೆಗಳೇ ಕಾರಣ ಎಂಬ ವಾದಗಳು ಇವೆ. ಖರ್ಗೆ ಅವರ ನಂತರ ರಾಜ್ಯ ಕಾಂಗ್ರೆಸ್ನಲ್ಲಿ ಅತ್ಯಂತ ಪ್ರಭಾವಿಯಾಗಿ ಬೆಳೆದಿರುವ ಸಿದ್ದರಾಮಯ್ಯ ಅವರು ಎಲ್ಲಾ ನಾಯಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರಂತಹ ನಾಯಕರು ಕೂಡ ಸಿದ್ದರಾಮಯ್ಯ ಅವರ ಅಣತಿಯಂತೆಯೇ ನಡೆಯುತ್ತಿದ್ದಾರೆ.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ನಡೆಸಿದ್ದರು. ಆದರೂ ಕಾಂಗ್ರೆಸ್ ಸೋಲುಂಟಾಯಿತು.
2013ರಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸರಗೊಂಡಿದ್ದ ಜನ ತಾವಾಗಿಯೇ ಕಾಂಗ್ರೆಸ್ಗೆ ಮತ ಹಾಕಿದ್ದರು.ಆದರೆ, ಆ ಗೆಲುವನ್ನು ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವಕ್ಕೆ ಸಿಕ್ಕ ಜಯ ಎಂದು ಬಿಂಬಿಸಿಕೊಂಡು ಮುಖ್ಯಮಂತ್ರಿ ಹುದ್ದೆಯನ್ನೂ ಗಿಟ್ಟಿಸಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅದೇ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಹಿನ್ನಡೆಯಾಗಿದೆ.ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ನಾಯಕರು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿ ಪ್ರಚಾರ ನಡೆಸಿದ್ದರು.
ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಲ್ಲದೆ, ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದರಿಂದ ಮುಖಭಂಗ ಅನುಭವಿಸುವಂತಾಯಿತು.
ಹಾಗಾಗಿ ನೇರವಾಗಿ ರಾಜ್ಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಬದಲಾಗಿ ಹೈಕಮಾಂಡ್ನಲ್ಲಿ ತಮಗಿರುವ ಪ್ರಭಾವನ್ನು ಬಳಸಿಕೊಂಡು ಹಂತ ಹಂತವಾಗಿ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಅದರಲ್ಲಿ ಮೊದಲ ಹೆಜ್ಜೆಯಾಗಿ ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರ ಬದಲಾವಣೆಯಾಗಬೇಕೆಂದು ಖರ್ಗೆ ಹೈಕಮಾಂಡ್ ಮೇಲೆ ಒತ್ತಡ ಹೇರಿರುವುದಾಗಿ ತಿಳಿದು ಬಂದಿದೆ. ಆದರೆ, ಈ ಇಬ್ಬರೂ ನಾಯಕರು ತಮಗೆ ಆತ್ಮೀಯರಾಗಿರುವುದರಿಂದ ಅವರ ಬದಲಾವಣೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಈ ಇಬ್ಬರೂ ನಾಯಕರ ಬದಲಾವಣೆಗೆ ಪಟ್ಟು ಹಿಡಿದಿದ್ದೇ ಆದರೆ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ವೇಳೆ ಕಲಬುರ್ಗಿಯಿಂದ ಅಜಯ್ಸಿಂಗ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಡ ಹೇರುವ ಮೂಲಕ ಖರ್ಗೆ ಕುಟುಂಬಕ್ಕೆ ಟಾಂಗ್ ನೀಡುವ ಲೆಕ್ಕಾಚಾರ ಹಾಕಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಾರೆ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಒಳಬೇಗುದಿಗಳು ಹೊಗೆಯಾಡಲಾರಂಭಿಸಿವೆ.