ಇವಿಎಂ ಮತ್ತು ವಿವಿ ಪ್ಯಾಟ್ಗಳ ಮತಗಳನ್ನು ತಿರುಚಲು ಸಾಧ್ಯವಿಲ್ಲ-ಅನುಮಾನಗಳಿದ್ದರೆ ನ್ಯಾಯಾಲಯಕ್ಕೆ ಹೋಗಲಿ-ಬಿಇಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಗೌತಮ್

ಬೆಂಗಳೂರು, ಜೂ.1-ಬಿಇಎಲ್ ಪೂರೈಸಿರುವ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್‍ಗಳ ಮತಗಳನ್ನು ತಿರುಚಲು ಸಾಧ್ಯವಿಲ್ಲ. ಒಂದು ವೇಳೆ ಯಾರಿಗಾದರೂ ಈ ಬಗ್ಗೆ ಅನುಮಾನಗಳಿದ್ದರೆ ನ್ಯಾಯಾಲಯಕ್ಕೆ ಹೋಗಲಿ ಎಂದು ಬಿಇಎಲ್‍ನ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಗೌತಮ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಬಿಇಎಲ್ 400 ಕ್ಷೇತ್ರಗಳಿಗೆ ಮತಯಂತ್ರಗಳನ್ನು ಪೂರೈಸಿದೆ. ಇದರಿಂದ 2600 ಕೋಟಿ ರೂ.ಆದಾಯ ಬಂದಿದೆ ಎಂದು ಹೇಳಿದರು.

ಬಿಇಎಲ್ ಪೂರೈಸಿರುವ ಮತ ಯಂತ್ರಗಳನ್ನು ಯಾವುದೇ ಕಾರಣಕ್ಕೂ ಹ್ಯಾಕ್ ಮತ್ತು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಾಂತ್ರಿಕವಾಗಿಯೂ ಇವು ಅತ್ಯಂತ ಸುರಕ್ಷತಾ ಯಂತ್ರಗಳಾಗಿವೆ. ಒಂದು ವೇಳೆ ಯಾರಿಗಾದರೂ ಅನುಮಾನಗಳಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಬಿಇಎಲ್ 45 ದಿನಗಳವರೆಗೆ ಇವುಗಳನ್ನು ಯಥಾಸ್ಥಿತಿಯಲ್ಲಿ ಸುರಕ್ಷಿತವಾಗಿ ಕಾಯ್ದುಕೊಂಡಿರುತ್ತದೆ. ಕೋರ್ಟ್ ಆದೇಶದ ಮೂಲಕ ಅವುಗಳನ್ನು ಮರುಪರಿಶೀಲನೆಗೆ ಒಳಪಡಿಸಲು ಸಾಧ್ಯವಿದೆ ಎಂದು ಹೇಳಿದರು.

ಚುನಾವಣಾ ಆಯೋಗದಿಂದ ಸುಮಾರು 10 ಲಕ್ಷ ಇವಿಎಂ ಮತ್ತು ವಿವಿ ಪ್ಯಾಟ್‍ಗಳಿಗೆ ಆದೇಶ ಬಂದಿತ್ತು. ಆಯೋಗ ಕೇಳಿದಷ್ಟು ಮತ ಯಂತ್ರಗಳನ್ನು ಪೂರೈಕೆ ಮಾಡಲಾಗಿದೆ. ಒಂದೇ ಒಂದು ಪ್ರಕರಣದಲ್ಲೂ ಮಿಸ್‍ಮ್ಯಾಚ್ ಆಗಿರುವ ಮಾಹಿತಿ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

2018-19ನೇ ಆರ್ಥಿಕ ವರ್ಷದಲ್ಲಿ ಬಿಇಎಲ್ 2703 ಕೋಟಿ ರೂ.ಲಾಭ ಗಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಂಪನಿ ಶೇ.17ರಷ್ಟು ಅಭಿವೃದ್ಧಿ ಸಾಧಿಸಿದೆ.ಒಟ್ಟು ಈ ವರ್ಷದ ವಹಿವಾಟು 11,789 ಕೋಟಿ ರೂ.ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗಕ್ಕೆ ಮತಯಂತ್ರಗಳು ಮತ್ತು ವಿವಿ ಪ್ಯಾಟ್‍ಗಳು, ಕೇಂದ್ರಸರ್ಕಾರಕ್ಕೆ ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್, ರಕ್ಷಣಾ ಇಲಾಖೆಗೆ ಆಯುಧ ಪತ್ತೆ ಹಚ್ಚುವ ರಾಡರ್, ಗ್ರೌಂಡ್‍ಬೇಸಡ್ ಮೊಬೈಲ್ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸಿಸ್ಟಮ್, ಕೆಲವು ಮೇಲ್ದರ್ಜೆಗೇರಿದ ಆಯುಧಗಳು ಸೇರಿದಂತೆ ಹಲವಾರು ಹೊಸ ಪ್ರಯೋಗಗಳನ್ನು ಬಿಇಎಲ್ ಮಾಡಿದೆ.

ವಿವಿಧ ಸಂಸ್ಥೆಗಳಿಂದ 51 ಸಾವಿರ ಆರ್ಡರ್‍ಗಳು ಬಂದಿವೆ. ನೌಕಾಪಡೆಯಿಂದ 25 ಸಾವಿರ, ಭೂಸೇನೆಯಿಂದ 9 ಸಾವಿರ, ವಾಯುಪಡೆಯಿಂದ 8,800 ಆರ್ಡರ್‍ಗಳು ಬಂದಿವೆ. ರಕ್ಷಣಾ ಉತ್ಪನ್ನ ಹೊರತುಪಡಿಸಿ 3,100 ಆದೇಶಗಳು ಬಿಇಎಲ್‍ಗೆ ಸಿಕ್ಕಿದೆ ಎಂದು ವಿವರಿಸಿದರು.

ದೇಶಾದ್ಯಂತ ಇರುವ ಮೆಟ್ರೋ ಸ್ಟೇಷನ್‍ಗಳಲ್ಲಿ 2ರಿಂದ 3 ಸ್ವಯಂಚಾಲಿತ ಶುಲ್ಕ ಸಂಗ್ರಹ ಯಂತ್ರಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇಸ್ರೋಗಾಗಿ ಉಪಗ್ರಹಗಳನ್ನು ತಯಾರು ಮಾಡಿಕೊಡುವ ಗುರಿಯನ್ನು ಸಂಸ್ಥೆ ಹೊಂದಿದ್ದು, ಇದಕ್ಕಾಗಿ ದೇವನಹಳ್ಳಿ ಬಳಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ 30 ಎಕರೆ ಜಮೀನು ಖರೀದಿಸಲಾಗಿದೆ. ಇಲ್ಲಿ ಸ್ಪೇಸ್ ಎಲೆಕ್ಟ್ರಾನಿಕ್ಸ್‍ಗೆ ಸಂಬಂಧಪಟ್ಟಂತಹ ಕಾರ್ಯಗಳನ್ನು ನಿರ್ವಹಿಸುವ ವಿಭಾಗಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಇಸ್ರೋ ಜೊತೆ ಸ್ಯಾಟ್‍ಲೈಟ್ ಬಿಡಿಭಾಗಗಳ ಜೋಡಣೆ, ಪರೀಕ್ಷಾರ್ಥ ಪ್ರಯೋಗಕ್ಕಾಗಿ ಬಿಇಎಲ್ ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ ಒಂದು ಉಪಗ್ರಹವನ್ನು ಜೋಡಿಸಲಾಗಿದೆ. ಈ ವರ್ಷ ಮತ್ತಷ್ಟು ಉಪಗ್ರಹಗಳನ್ನು ಜೋಡಿಸಲಾಗುವುದು ಎಂದು ಅವರು ತಿಳಿಸಿದರು.

ಈ ವರ್ಷ ಶೇ.96ರಷ್ಟು ಸ್ವದೇಶಿ ತಂತ್ರಜ್ಞಾನ ಬಳಸಿ ಉತ್ಪಾದಿಸಿದ ವಸ್ತುಗಳನ್ನು ಮಾರಾಡ ಮಾಡಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ