ಹಾಸನ; ಇಲ್ಲಿನ ನೇತ್ರಾವತಿ ನದಿ ತಿರುವು ಎತ್ತಿನಹೊಳೆ ಯೋಜನೆ ವಿರೋಧಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಪೀಠ ವಜಾ ಮಾಡಿದ್ದು, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ.
ಶಾಶ್ವತ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆಯೇ ಈ ‘ಎತ್ತಿನಹೊಳೆ ಯೋಜನೆ’. 13,200 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈಗಾಗಲೇ 2,500 ಕೋಟಿ ಹಣ ಖಚ್ಚು ಮಾಡಿದೆ. ಆದರೆ, ಈ ಯೋಜನೆ ಆರಂಭವಾದ ದಿನದಿಂದಲೂ ಇದರ ವಿರುದ್ಧ ಕೂಗು ಕೇಳಿ ಬರುತ್ತಲೇ ಇದೆ.
ಎತ್ತಿನ ಹೊಳೆ ತಿರುವು ಯೋಜನೆಗೆ ಸಕಲೇಶಪುರದ ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ. ಅಲ್ಲಿಂದ ವಿದ್ಯುತ್ ಚಾಲಿತ ಬೃಹದಾಕಾರದ ಮೋಟರ್ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್ಗಳ ಮೂಲಕ ನೀರೆತ್ತಿ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯಲ್ಲಿ ನಿರ್ಮಿಸುವ ವಿಶಾಲವಾದ ವಿತರಣಾ ತೊಟ್ಟಿಗೆ ಬಿಡಲಾಗುವುದು.
ಈ ಕಾರ್ಯಕ್ಕೆ ಬೃಹದಾಕಾರದ ಪೈಪ್ ಅಳವಡಿಸಲು ಹಾಗೂ ವಿದ್ಯುತ್ ಸರಬರಾಜಿಗೆ ಅರಣ್ಯದೊಳಗೆ 120 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗುವುದು.
ಇದಕ್ಕೆ ಕನಿಷ್ಠ 60 ಕಿ. ಮೀ ವ್ಯಾಪ್ತಿಯಷ್ಟು ಅರಣ್ಯ ನಾಶ ಮಾಡಿ ಆ ಪ್ರದೇಶವನ್ನು ಸಮಗೊಳಿಸಿ ಭೂಮಿಯ ಒಳಭಾಗದಲ್ಲಿ ಕೊಳವೆಗಳನ್ನು ಹೂಳಲಾಗುವುದು.
ಇದರಿಂದ 400 ಎಕರೆಗೂ ಮೀರಿದ ಅರಣ್ಯ ನಾಶವಾಗುವ ಸಾಧ್ಯತೆ ಇದೆ. ಪಶ್ಚಿಮ ಘಟ್ಟ ನಾಶವಾಗಿದ್ದು ಈಗಾಗಲೇ 20 ಸಾವಿರ ಮರಗಳನ್ನು ಕಡಿಯಲಾಗಿದೆ.
ಅಪಾರ ಪ್ರಮಾಣದ ವನ್ಯಜೀವಿಗಳ ಮಾರಣ ಹೋಗವಾಗಿದೆ. ಅಲ್ಲದೆ ಕುಡಿಯುವ ನೀರಿನ ಯೋಜನೆ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾನೂನುಗಳನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂಬುದು ಪರಿಸರವಾದಿಗಳ ಆರೋಪ.
ಇದೇ ಕಾರಣಕ್ಕೆ ಈ ಯೋಜನೆಗೆ ತಡೆ ನೀಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಪರಿಸರವಾದಿಗಳು ದೆಹಲಿಯಲ್ಲಿರುವ ಹಸಿರು ನ್ಯಾಯ ಪೀಠಕ್ಕೆ ಅರ್ಜಿ ಸಲ್ಲಿಸಿ ಈ ಯೋಜನೆಯನ್ನು ಕೈಬಿಡಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಹಸಿರು ನ್ಯಾಯ ಪೀಠ ತಿರಸ್ಕರಿಸಿದ್ದು, ಪರಿಸರವಾದಿಗಳಾದ ಕಿಶೋರ್ ಮತ್ತು ವಿಜಯ್ ಈ ಕುರಿತು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.