
ನವದೆಹಲಿ: ಬಿಜೆಪಿ ವಿರುದ್ಧ ಪ್ರತಿದಿನವೂ ಹೋರಾಡುವ ಬಗ್ಗೆ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ಕಳೆದ ಬಾರಿ ನಾವು 44 ಸದಸ್ಯರಿದ್ದೆವು. ಈ ಬಾರಿ ನಮ್ಮ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಹೀಗಾಗಿ ಇನ್ನು ಮುಂದೆ ನಾವು ಪ್ರತಿದಿನವೂ ಬಿಜೆಪಿ ವಿರುದ್ಧ ಹೋರಾಟ ಸಂಘಟಿಸೋಣ ಎಂದು ಕಾಂಗ್ರೆಸ್ನ ಸಂಸದೀಯ ಪಕ್ಷದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣೆ ಸೋಲು ಬಿಜೆಪಿ ವಿರುದ್ಧದ ಸೈದ್ಧಾಂತಿಕ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ, ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ನ 52 ಸಂಸದರು ಸಾಕು ಎಂದು ಹೇಳಿದ್ದಾರೆ.
ದೇಶದ ಜಾತ್ಯಾತೀತ ಸ್ವರೂಪವನ್ನು ರಕ್ಷಿಸುವ ಹೊಣೆ ಕಾಂಗ್ರೆಸ್ ಮೇಲಿದ್ದು, ಯಾವುದೇ ಕಾರಣಕ್ಕೂ ಪಕ್ಷ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ. ಸಂವಿಧಾನಕ್ಕಾಗಿ ಹೋರಾಟ ಮಾಡುವುದನ್ನು ಪ್ರತಿಯೊಬ್ಬ ಕಾಂಗ್ರೆಸ್ ಸಂಸದ ನೆನಪಿಟ್ಟುಕೊಳ್ಳಬೇಕು. ಚರ್ಮದ ಬಣ್ಣ ಅಥವಾ ವ್ಯಕ್ತಿಯ ಬಗ್ಗೆ ಗಮನ ಕೊಡದೇ ಸಂವಿಧಾನಕ್ಕಾಗಿ ಹೋರಾಡಬೇಕು. ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟ ನಿತ್ಯ ನಿರಂತರ ಎಂದರು.
ಆಂತರಿಕವಾಗಿ ನಾವು ಆತ್ಮಾವಲೋಕನ ಮಾಡಿಕೊಳ್ಳೋಣ. ನಮ್ಮನ್ನು ನಾವು ಹುರಿದುಂಬಿಸಿಕೊಳ್ಳೋಣ. ನಾವೆಲ್ಲರೋ ಒಂದಾಗಿ ಮುಂದೆ ಸಾಗಿದರೆ ಎಲ್ಲವೂ ಸಾಧ್ಯ ಎಂದು ತಿಳಿಸಿದರು. ಇದೇ ವೇಳೆ ಸಂಸದೀಯ ಪಕ್ಷದ ನಾಯಕಿಯಾಗಿ ಆಯ್ಕೆಯಾದ ತಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಅಭಿನಂದಿಸಿದರು.
52 Congress Lok Sabha MPs enough to make BJP jump everyday, says Rahul Gandhi