ವಿಶ್ವಕಪ್ ಮಹಾಸಂಗ್ರಾಮದ ಎರಡನೇ ಪಂದ್ಯದಲ್ಲಿ ಇಂದು ಸರ್ಫಾರಾಜ್ ನೇತೃತ್ವದ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ತಂಡವನ್ನ ಎದುರಿಸಲಿದೆ.
ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ವೆಸ್ಟ್ ಇಂಡೀಸ್ ಪಾಕಿಸ್ತಾನ ತಂಡಗಳು ಈ ಹಿಂದೆ ಜಿದ್ದಜಿದ್ದಿನ ಪೈಪೋಟಿ ನೀಡಿವೆ. ಈ ಕಾರಣಕ್ಕಾಗಿ ಇಂದು ನಾಟಿಗ್ಯಾಂಮ್ನ ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ ನಡೆಯುವ ಪಂದ್ಯ ಕೂತೂಹಲ ಮೂಡಿಸಿದೆ.
ಎರಡು ವರ್ಷಗಳ ಹಿಂದೆ ಇದೇ ಆಂಗ್ಲರ ನಾಡಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದಿದ್ದ ಪಾಕ್ ನಾಯಕ ಸರ್ಫಾರಾಜ್ ಖಾನ್ ಇದೇ ಹುಮ್ಮಸ್ಸಿನಲ್ಲಿ ಇಂದು ವೆಸ್ಟ್ ಇಂಡೀಸ್ ವಿರುದ್ಧ ಶುಭಾರಂಭ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ.
ಆದರೆ ಸರ್ಫಾರಾಜ್ ಪಡೆಯ ಇತ್ತಿಚಿನ ಪ್ರದರ್ಶನ ತುಂಬ ಕಳಪೆಯಾಗಿದ್ದು ಆಸ್ಟ್ರೇಲಿಯಾ ವಿರುದ್ಧ 0-5 ಅಂತರದ ವೈಟ್ವಾಶ್ ಮತ್ತು 0-4 ಇಂಗ್ಲೆಂಡ್ ವಿರುದ್ಧದ ಸೋಲು ಸೇರಿದಂತೆ ಒಟ್ಟು 10 ಏಕದಿನ ಪಂದ್ಯಗಳನ್ನ ಕೈಚೆಲ್ಲಿದೆ. ಮೊನ್ನೆ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋತು ಶಾಕ್ ಕೊಟ್ಟಿತ್ತು. ತಂಡದ ಸ್ಟಾರ್ ವೇಗಿ ಮೊಹ್ಮದ್ ಅಮೀರ್ ಫಾರ್ಮ್ ತಂಡಕ್ಕೆ ಬಹಳ ಮುಖ್ಯವಾಗಿದೆ.
ಇನ್ನು ವೆಸ್ಟ್ ಇಂಡೀಸ್ ತಂಡ ಈ ಹಿಂದಿನ ವಿಶ್ವಕಪ್ನಲ್ಲಿ ಪಾಕಿಸ್ಥಾನ ವಿರುದ್ಧ ಒಳ್ಳೆಯ ಪ್ರದರ್ಶನ ನೀಡಿದೆ. ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಂಡ್ರೆ ರಸ್ಸೆಲ್ ಇತ್ತಿಚೆಗೆ ಅಭ್ಯಾಸ ಪಂದ್ಯದಲ್ಲಿ 13 ಎಸೆತದಲ್ಲಿ 42 ರನ್ ಬಾರಿಸಿ ತಮ್ಮ ತಾಕತ್ತು ತೋರಿಸಿದ್ದಾರೆ. ರಸ್ಸೆಲ್ ಸಿಡಿದೆದ್ರೆ ವೆಸ್ಟ್ ಇಂಡೀಸ್ ಗೆಲ್ಲೊದ್ರಲ್ಲಿ ಅನುಮಾನವೇ ಇಲ್ಲ.