ಬೆಂಗಳೂರು, ಮೇ 31- ಅಭಿಮಾನಿಗಳೇ ದೇವರು ಎನ್ನುತ್ತಿದ್ದ ಅಪ್ಪಾಜಿ ಮಾತು ಸತ್ಯ ಎಂದು ರಾಘವೇಂದ್ರ ರಾಜ್ಕುಮಾರ್ ಇಂದಿಲ್ಲಿ ಗದ್ಗದಿತರಾದರು.
ಯಡಿಯೂರು ವಾರ್ಡ್ನ ಸೌಂತ್ ಎಂಡ್ ಸರ್ಕಲ್ನಲ್ಲಿ ನಿರ್ಮಿಸಿರುವ ದಿ. ಡಾ.ಪಾರ್ವತಮ್ಮ ರಾಜ್ಕುಮಾರ್ ಅವರ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಎನ್.ಆರ್.ರಮೇಶ್ ಅವರು ಅಪ್ಪಾಜಿ ಅವರ ಪುತ್ಥಳಿ ನಿರ್ಮಿಸುವಾಗ ಅವರ ಸಮಾಧಿಯ ಮಣ್ಣನ್ನು ಬಳಕೆ ಮಾಡಿಕೊಂಡಿದ್ದರು. ಇದೀಗ ಅಮ್ಮನ ಪುತ್ಥಳಿ ನಿರ್ಮಾಣಕ್ಕೂ ಸಮಾಧಿ ಮಣ್ಣು ಬಳಕೆ ಮಾಡಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದರು.
ನಮ್ಮ ಕುಟುಂಬದ ಬಗ್ಗೆ ಎನ್.ಆರ್.ರಮೇಶ್ ಅವರು ಇಟ್ಟುಕೊಂಡಿರುವ ಗೌರವದ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ಎಂದರು.
ಅಪ್ಪಾಜಿ ನಿಧನರಾಗಿ 14 ವರ್ಷ ಕಳೆದರೂ ಅವರ ಜನ್ಮ ದಿನಾಚರಣೆಯನ್ನು ಅಭಿಮಾನಿಗಳು ಮರೆತಿಲ್ಲ. ನಾವು ಮರೆತರೂ ಅಭಿಮಾನಿಗಳೇ ಹುಟ್ಟುಹಬ್ಬ ಆಚರಿಸುವುದನ್ನು ಕಂಡಾಗ ಅಪ್ಪಾಜಿ ಹೇಳುತ್ತಿದ್ದ ಅಭಿಮಾನಿಗಳೇ ದೇವರು ಎಂಬ ಮಾತು ನೆನಪಾಗುತ್ತದೆ ಎಂದು ಗದ್ಗದಿತರಾದರು.
ಪುತ್ಥಳಿ ರೂವಾರಿ ಎನ್.ಆರ್.ರಮೇಶ್ ಮಾತನಾಡಿ, ಇಡೀ ದೇಶದಲ್ಲೇ ನಿರ್ಮಾಪಕಿಯೊಬ್ಬರ ಕಂಚಿನ ಪುತ್ಥಳಿ ನಿರ್ಮಾಣವಾಗುತ್ತಿರುವುದು ಇದೇ ಮೊದಲು.
ವರನಟ ಡಾ.ರಾಜ್ಕುಮಾರ್ ಪತ್ನಿಯಾಗಿ ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿರುವ ಪಾರ್ವತಮ್ಮ ಅವರನ್ನು ಕನ್ನಡಿಗರು ಎಂದೂ ಮರೆಯಬಾರದು ಎಂದರು.
ಪಾರ್ವತಮ್ಮನವರು ನಿರ್ಮಿಸಿದ ಬಹುತೇಕ ಚಿತ್ರಗಳು ಶತದಿನೋತ್ಸವ ಕಂಡಿವೆ. ಹೀಗಾಗಿ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಿಬಿಎಂಪಿ ಸಹಭಾಗಿತ್ವದಲ್ಲಿ ಅವರ ಕಂಚಿನ ಪುತ್ಥಳಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಅದರಲ್ಲೂ ಪಾರ್ವತಮ್ಮ ರಾಜ್ಕುಮಾರ್ ರಸ್ತೆಯಲ್ಲೇ ಅವರ ಪುತ್ಥಳಿ ನಿರ್ಮಿಸಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮೇಯರ್ ಗಂಗಾಂಬಿಕೆ, ಉಪ ಮೇಯರ್ ಭದ್ರೇಗೌಡ, ಶಾಸಕ ರವಿ ಸುಬ್ರಹ್ಮಣ್ಯ, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಗೀತಾ ಶಿವರಾಜ್ಕುಮಾರ್, ಚಿನ್ನೇಗೌಡ, ಎಸ್.ಎ.ಗೋವಿಂದರಾಜು, ಸಹೋದರಿ ನಾಗಮ್ಮ ಸೇರಿದಂತೆ ರಾಜ್ ಕುಟುಂಬ ವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.