ಕಸ ವಿಂಗಡಣೆಯಲ್ಲಿ ಆಧುನಿಕತೆ ಅನಿವಾರ್ಯ-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮೇ 31- ನಗರದಲ್ಲಿ ಐದು ಸಾವಿರ ಮೆಟ್ರಿಕ್‍ಟನ್ ಕಸ ಉತ್ಪತ್ತಿಯಾಗುತ್ತಿದೆ. ಕಸದಿಂದ ವಿದ್ಯುತ್ ಉತ್ಪಾದನೆ, ಗೊಬ್ಬರ ತಯಾರಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನೆದರ್‍ಲ್ಯಾಂಡ್ ನಿಯೋಗದೊಂದಿಗೆ ಮಾತುಕತೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸದ್ಯಕ್ಕೆ ಒಣ ಹಾಗೂ ಹಸಿ ಕಸ ಬೇರ್ಪಡಿಸಿ ಕೊಡುತ್ತಿದ್ದಾರೆ. ತ್ಯಾಜ್ಯದಲ್ಲಿ ಪುನರ್ ಸಂಸ್ಕರಣೆ ಮಾಡಲು ಯೋಗ್ಯ ಕಸವನ್ನು ಬೇರ್ಪಡಿಸಲೆಂದೇ ಬೀದಿ ಬದಿಯಲ್ಲಿ ಚಿಂದಿ ಆಯುವವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೇವೆ. ಇದರಿಂದ ಅವರಿಗೆ ಕೆಲಸ ಸಿಕ್ಕಿದೆ ಎಂದು ಹೇಳಿದರು.

ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಸವಿಂಗಡಣೆ ಚೆನ್ನಾಗಿ ನಡೆಯುತ್ತಿದೆ. ಕಸ ವಿಂಗಡಣೆ ಮತ್ತು ಪುನರ್ ಸಂಸ್ಕರಣೆಯಲ್ಲಿ ಆಧುನಿಕತೆ ತರಲು ನೆದರ್‍ಲ್ಯಾಂಡ್‍ನ ಸ್ವೀಪ್‍ಸ್ಮಾರ್ಟ್ ಯೋಜನೆ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ನಗರ ನಿವಾಸಿಗಳು ಶೇ.35ರಷ್ಟು ಒಣಕಸ ಮತ್ತು ಹಸಿ ಕಸ ಬೇರ್ಪಡಿಸಿಕೊಡುತ್ತಿದ್ದಾರೆ. ಇದು ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಹಾಗಾಗಿ ಕಸ ವಿಂಗಡಣೆಯಲ್ಲಿ ಆಧುನಿಕತೆ ತರುವುದು ಅನಿವಾರ್ಯ. ಇದರಿಂದಾಗಿ ನೆದರ್‍ಲ್ಯಾಂಡ್ ಜತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದರು.

ರಾಜ್ಯ ಸರ್ಕಾರ ಶೇ.35ರಷ್ಟು ಹಣಕಾಸು ನೆರವು ನೀಡಿ ಈ ಯೋಜನೆ ಜಾರಿಗೆ ತರುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಕಸದಿಂದ ವಿದ್ಯುತ್ ತಯಾರಿಸುವುದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ.

ತ್ಯಾಜ್ಯ, ನೀರು, ಪ್ಲ್ಯಾಸ್ಟಿಕ್, ವಿದ್ಯುತ್, ಮ್ಯಾನೆಜ್ಮೆಂಟ್ ಸಮಸ್ಯೆ ಇದೆ. ಇದನ್ನು ಪರಿಹರಿಸಲು ಸಾಕಷ್ಟು ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಬಿಬಿಎಂಪಿಗೆ ಈ ಸಂಬಂಧ ಹಣಕಾಸು ನೆರವನ್ನು ನೀಡಲಾಗುತ್ತಿದೆ. 11,600 ಕೋಟಿ ರೂ. ಬಜೆಟ್‍ಗೆ ಒಪ್ಪಿಗೆ ನೀಡಲಾಗಿದೆ. ಸುಮಾರು 50ಸಾವಿರ ಕೋಟಿಯನ್ನು ಈ ಐದು ವರ್ಷದಲ್ಲಿ ನಗರದ ಅಭಿವೃದ್ಧಿಗೆ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಸರ್ಕಾರದ ಅಪರಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ) ಮಹೇಂದ್ರ ಜೈನ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ