ಬೆಂಗಳೂರು: ಬಿಜೆಪಿ 25 ಸ್ಥಾನಗಳನ್ನು ಗೆಲ್ಲಲು ಕಾರಣರಾದ ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಸರ್ಕಾರ ರಚನೆ ಆಗುವವರೆಗೂ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ತನಕ ರಾಜ್ಯಾಧ್ಯಕ್ಷರ ಸ್ಥಾನದ ಬದಲಾವಣೆ ಇಲ್ಲ. ಹೇಗಾದ್ರೂ ಮಾಡಿ ಸಮ್ಮಿಶ್ರ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿ ಎಂದು ಕೇಂದ್ರ ನಾಯಕರು ರಾಜ್ಯದವರಿಗೆ ತಿಳಿಸಿದ್ದಾರೆ. ಇನ್ನು, ಈ ಸಂಬಂಧ ಕೇಂದ್ರದ ಹೈಕಮಾಂಡ್ ನಾಯಕರ ಜತೆಗೆ ಇಂದು ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.
ಕಾಂಗ್ರೆಸ್ನ ಹಲವು ಶಾಸಕರು ಬಿಜೆಪಿಗೆ ಬರಲು ಉತ್ಸುಕತೆ ತೋರಿದ್ದಾರೆ. ಆದರೆ ಅಲ್ಲಿಯ ತನಕ ಕಾಯಬೇಡಿ, ನಿಮ್ಮ ಕೆಲಸವನ್ನು ಮಾಡಿ ಎಂದು ಹೈಕಮಾಂಡ್ ಬಿಎಸ್ವೈಗೆ ತಿಳಿಸಿದೆ. ಉಳಿದ ಬೇರೆ ಬೇರೆ ಘಟಕಗಳನ್ನ ಅಧಿವೇಶನದ ಬಳಿಕ ಬದಲಾವಣೆ ಮಾಡಲು ಚರ್ಚೆ ನಡೆದಿದೆ. ಕೆಲವೇ ಕೆಲವು ಪ್ರಭಾವೀ ನಾಯಕರನ್ನ ಪಕ್ಷದ ದೃಷ್ಟಿಯಿಂದ ಅದೇ ಹುದ್ದೆಯಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿ ಕೂಡ ರಾಜ್ಯಾಧ್ಯಕ್ಷ ಹುದ್ದೆಯ ಬದಲಾವಣೆ ಸದ್ಯಕ್ಕಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ರಚನೆ ನಂತರವಷ್ಟೇ ರಾಜ್ಯಾಧ್ಯಕ್ಷ ಹುದ್ದೆ ಬದಲಾವಣೆ ಮಾಡುವ ಸಾಧ್ಯತೆ ಇದೆ .
ಇನ್ನೊಂದೆಡೆ ಮೋದಿ ಸಂಪುಟದಲ್ಲಿ ಯಡಿಯೂರಪ್ಪ ಹೇಳಿದ ಯಾವ ಹೆಸರಿಗೂ ಹೈಕಮಾಂಡ್ ಮಣೆ ಹಾಕಿಲ್ಲದಿರುವುದು ಭಾರೀ ಹಿನ್ನಡೆಯಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಬಿಎಸ್ ವೈ ವಿರೋಧಿ ಬಿ.ಎಲ್. ಸಂತೋಷ್ ಮೇಲುಗೈ ಸಾಧಿಸಿದ್ದಾರೆ. ತಮ್ಮ ಬೆಂಬಲಿಗ ಬಾಗಲಕೋಟೆ ಸಂಸದ ಗದ್ದೀಗೌಡರ್ ಅವರಿಗೆ ಮಂತ್ರಿ ಸ್ಥಾನ ಕೊಡಿಸುವಲ್ಲೂ ಸೋತಿದ್ದಾರೆ. ಜತೆಗೆ ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಿದ ಸಂಸದ ಉಮೇಶ್ ಜಾಧವ್ ಅವರಿಗೆ ಮಂತ್ರಿ ಮಾಡುವ ಭರವಸೆಯನ್ನೂ ಸಹ ಬಿಎಸ್ವೈ ನೀಡಿದ್ದರು. ಆದರೆ, ಕೊಟ್ಟ ಮಾತು ಉಳಿಸಿಕೊಳ್ಳಲು ಬಿಎಸ್ವೈ ವಿಫಲರಾಗಿದ್ದಾರೆ. ಶೋಭಾ ಕರಂದ್ಲಾಜೆಗೂ ಮಂತ್ರಿ ಸ್ಥಾನ ಕೊಡಿಸಲು ಅವರಿಂದ ಸಾಧ್ಯವಾಗಿಲ್ಲ.