ನಗರದಲ್ಲಿ ತಾಂಡವವಾಡುತ್ತಿರುವ ನೀರು, ಕಸ ಮತ್ತು ವಿದ್ಯುತ್ ಸಮಸ್ಯೆ

ಬೆಂಗಳೂರು, ಮೇ 30- ನಗರದಲ್ಲಿ ಕುಡಿಯುವ ನೀರು, ವಿದ್ಯುತ್, ಕಸದ ಸಮಸ್ಯೆ ತಾಂಡವವಾಡುತ್ತಿದೆ. ಆದರೆ, ಪಾಲಿಕೆ ಸಭೆಯನ್ನು ಆಡಳಿತ-ಪ್ರತಿಪಕ್ಷದ ಸದಸ್ಯರು ಸ್ವಹಿತಕ್ಕಾಗಿ ಬಲಿಕೊಟ್ಟರು.

ಬೆಳಗ್ಗೆ ಸಭೆ ಪ್ರಾರಂಭವಾದಾಗಿನಿಂದ ಮೋದಿ ವಿಚಾರವೇ ಸಭೆಯಲ್ಲಿ ಸುತ್ತುತ್ತಿತ್ತು. ನಂತರ ಸಭೆ ಮುಂದುವರಿದಾಗ ಬಿಜೆಪಿ ಸದಸ್ಯ ಮಂಜುನಾಥ್ ರಾಜು ಅವರು ಕಸದ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದರು. ಆಗ ಮತ್ತೊಬ್ಬ ಸದಸ್ಯ ಬಾಲಕೃಷ್ಣ ಅವರು ನಮ್ಮ ವಾರ್ಡ್‍ನಲ್ಲೂ ಕಸದ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು.

ಈ ನಡುವೆ ಯಶವಂತಪುರ ವಾರ್ಡ್ ಸದಸ್ಯ ಎನ್‍ಟಿಆರ್ ಅವರು ಸಮಸ್ಯೇನ ನಮಗೇನು ಹೇಳ್ತೀರ. ಮೋದಿ ಅವರಿಗೆ ಹೇಳಿ ಕ್ಲಿಯರ್ ಮಾಡಿಸಿಕೊಳ್ಳಿ ಎಂದುಬಿಟ್ಟರು.

ಇದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರನ್ನು ಕೆರಳಿಸಿತು. ಮೋದಿ ವಿಚಾರಕ್ಕೆ ಯಾಕೆ ಬರ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿ ಎನ್‍ಟಿಆರ್ ಅವರು ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದರು.

ಆಗ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಇದನ್ನು ಇಲ್ಲಿಗೇ ಬಿಟ್ಟುಬಿಡಿ. ಸಭೆ ಮುಂದುವರಿಸಿ ಎಂದಾಗ ಪದ್ಮನಾಭರೆಡ್ಡಿ ವಾಜಿದ್ ಅವರ ವಿರುದ್ಧ ದನಿ ಏರಿಸಿ ಹೊಡೆಯುವಂತೆ ಮುನ್ನುಗ್ಗಿದರು. ಆಗ ಉಮೇಶ್‍ಶೆಟ್ಟಿ ಮತ್ತಿತರರು ಅವರತ್ತ ನುಗ್ಗಿದರು.

ಈ ವೇಳೆ ವಾದ-ವಿವಾದ ಜಾಸ್ತಿಯಾಗುತ್ತಿದ್ದುದನ್ನು ಕಂಡು ಮೇಯರ್ ಗಂಗಾಂಬಿಕೆ ಸಭೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಕಳೆದ ಎರಡು-ಮೂರು ತಿಂಗಳಿನಿಂದ ಲೋಕಸಭೆ ಚುನಾವಣೆಯಿಂದಾಗಿ ನೀತಿ-ಸಂಹಿತೆ ಜಾರಿಯಲ್ಲಿತ್ತು. ಕಸದ ಸಮಸ್ಯೆ, ನೀರಿನ ಸಮಸ್ಯೆ ನಗರದಲ್ಲಿ ತಾಂಡವವಾಡುತ್ತಿದೆ. ಕಳೆದ ಎರಡು-ಮೂರು ದಿನಗಳಿಂದ ಮಳೆ ಸುರಿದು ಮರಗಳು, ವಿದ್ಯುತ್ ಕಂಬಗಳು ಉರುಳಿ ಸಾಕಷ್ಟು ಅನಾಹುತಗಳು ಆದವು. ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ.

ನರೇಂದ್ರ ಮೋದಿಯವರ ವಿಚಾರ ಬಿಟ್ಟು ಇಂದಿನ ಪಾಲಿಕೆ ಸಭೆಯಲ್ಲಿ ಈ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಇವೆಲ್ಲವನ್ನೂ ಕೈ ಬಿಟ್ಟು ತಮ್ಮ ತಮ್ಮ ಪಕ್ಷಗಳ ಹಿತಾಸಕ್ತಿಗೆ ಗಮನ ಕೊಟ್ಟು ಇಡೀ ಸಭೆಯನ್ನು ಬಲಿಕೊಟ್ಟಿರುವುದು ಬೆಂಗಳೂರಿನ ಜನರ ದುರ್ದೈವವೇ ಸರಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ