ಬೆಂಗಳೂರು: ತಮಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿರುವುದು ಸಂತಸ ತಂದಿದೆ. ರಾಜ್ಯದ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಯತ್ನ ನಡೆಸುವುದಾಗಿ ಸಂಸದ ಸುರೇಶ್ ಅಂಗಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ನಮ್ಮನ್ನ ಗುರುತಿಸಿ ಸಚಿವರಾಗಿ ಕೆಲಸ ಮಾಡಲು ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ಇದು ತುಂಬಾ ಖುಷಿಯ ವಿಚಾರ ಎಂದರು. ಸಚಿವನಾಗಿ ಕೇಂದ್ರ ಹಾಗೂ ರಾಜ್ಯದ ಕೊಂಡಿಯಾಗಿ ರಾಜ್ಯದ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುವುದರ ಜೊತೆಗೆ, ಮೋದಿಯವರ ಯೋಜನೆಗಳನ್ನು ಜನತೆಗೆ ತಲುಪಿಸಲು ಶ್ರಮಿಸುವುದಾಗಿ ತಿಳಿಸಿದರು.
ಕ್ಷೇತ್ರದ ಜನತೆಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸುತ್ತೇನೆ. ಮೋದಿ ಅವರೊಂದಿಗೆ ಕೆಲಸ ಮಾಡಲು ಹೆಚ್ಚು ಸಂತಸವಾಗುತ್ತದೆ. ಇಂದು ನನ್ನ ಗೆಲುವಿಗೆ ಮೋದಿಯವರ ಯೋಜನೆಗಳೇ ಕಾರಣ. ಅವರ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಜನತೆಗೆ ತಲುಪಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಬರಲಾರವು ಎಂದರು.