ಬೆಂಗಳೂರು, ಮೇ 30- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2 ವಾರ್ಡ್ಗಳು ಸೇರಿದಂತೆ 8 ನಗರಸಭೆಯ, 33 ಪುರಸಭೆಯ, 22 ಪಟ್ಟಣ ಪಂಚಾಯ್ತಿಗಳ ಒಟ್ಟು 63ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25ಸ್ಥಾನಗಳನ್ನು ಭದ್ರಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವ ಫಲಿತಾಂಶ ಹೊರಬೀಳಲಿದೆ ಎಂಬ ಬಗ್ಗೆ ಕಾತುರದಿಂದ ಕಾಯುವಂತಾಗಿದೆ.
ರಾಜ್ಯದ ಮಿನಿ ಮಹಾಸಮರವೆಂದೇ ಬಿಂಬಿತವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿನ್ನೆಯಷ್ಟೆ ನಡೆದಿದ್ದು, ಶೇಕಡಾ 72ರಷ್ಟು ಮತದಾನ ನಡೆದಿದೆ.
ನಾಳೆ ಬಿಬಿಎಂಪಿ 2ವಾರ್ಡ್ಗಳು ಸೇರಿದಂತೆ 8 ನಗರಸಭೆಯ 247 ವಾರ್ಡ್ಗಳು, 33 ಪುರಸಭೆಯ 734 ವಾರ್ಡ್, 22 ಪಟ್ಟಣ ಪಂಚಾಯ್ತಿಗಳ 315ವಾರ್ಡ್ಗಳು ಸೇರಿದಂತೆ 63ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆದಿದ್ದು ಒಟ್ಟು 1326ವಾರ್ಡ್ಗಳ ಪೈಕಿ 30ರಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.
1296ವಾರ್ಡ್ಗಳಿಗೆ ಮತದಾನ ನಡೆದಿದ್ದು, 4260 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಒಟ್ಟು 14.79ಲಕ್ಷ ಮತದಾರರು ಈ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದಾರೆ. ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ, ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಿಗಿ ಭದ್ರತೆಯೊಂದಿಗೆ ಶಾಂತಿಯುತವಾಗಿ ಮತದಾನ ನಡೆದಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ 1224, ಬಿಜೆಪಿ 1125, ಜೆಡಿಎಸ್ನಿಂದ 780, ಪಕ್ಷೇತರರಾಗಿ 1156 ಅಭ್ಯರ್ಥಿಗಳು ಕಣದಲ್ಲಿದ್ದರು.