ಬೆಂಗಳೂರು, ಮೇ 30- ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಿ ತುರ್ತಾಗಿ ಅಧಿಕಾರ ಹಿಡಿಯಲು ಗ್ರೀನ್ ಸಿಗ್ನಲ್ ನೀಡಬೇಕು.ಇಲ್ಲದಿದ್ದರೆ ಪರಿಸ್ಥಿತಿ ನಮಗೇ ಉಲ್ಟಾ ಹೊಡೆಯಬಹುದು ಎಂದು ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಒಕ್ಕೊರಲಿನಿಂದ ಪಕ್ಷದ ವರಿಷ್ಟರನ್ನು ಒತ್ತಾಯಿಸಿದ್ದಾರೆ.
ನರೇಂದ್ರಮೋದಿ ಅವರು ಇಂದು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿರುವ ಬಿಜೆಪಿ ನಾಯಕರು, ವರಿಷ್ಟರ ಜತೆ ಮಾತುಕತೆ ನಡೆಸಿದ್ದು, ಸರ್ಕಾರ ಬೀಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರುವುದು ಡೇಂಜರ್. ಹೀಗಾಗಿ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿ ಅಧಿಕಾರ ಹಿಡಿಯಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಮತ್ತವರ ಬೆಂಬಲಿಗರು ಮಾತ್ರ ಕುಮಾರಸ್ವಾಮಿ ಸರ್ಕಾರ ಉರುಳಿಸಿ ಪರ್ಯಾಯ ಸರ್ಕಾರ ರಚಿಸುವ ಆಸಕ್ತಿಯಲ್ಲಿದ್ದರಾದರೆ, ಈಗ ಯಡಿಯೂರಪ್ಪ ಅವರ ವಿರೋಧಿ ಬಣವೂ ತುರ್ತು ಸರ್ಜಿಕಲ್ ಸ್ಟ್ರೈಕ್ ನಡೆಸಿ ಸರ್ಕಾರವನ್ನು ಬೀಳಿಸಬೇಕು. ಯಡಿಯೂರಪ್ಪ ಅವರ ನೇತೃತ್ವದಲ್ಲೇ ಪರ್ಯಾಯ ಸರ್ಕಾರ ಬರುವಂತೆ ಮಾಡಬೇಕು ಎನ್ನುತ್ತಿರುವುದು ಗಮನಾರ್ಹ.
ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಭಾರೀ ಗೆಲುವಿನ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ತಾನೇ ಬೀಳುವವರೆಗೆ ಸುಮ್ಮನಿರೋಣ.ಅದು ಬಿದ್ದ ಮೇಲೆ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿ ಮಧ್ಯಂತರ ಚುನಾವಣೆಗೆ ಸಿದ್ಧರಾಗೋಣ.
ರಾಜಸ್ತಾನ ಹಾಗೂ ಮಧ್ಯಪ್ರದೇಶದ ಸರ್ಕಾರಗಳೂ ಬೀಳುವ ಸ್ಥಿತಿಯಲ್ಲಿದ್ದು ಹೀಗಾಗಿ ನವೆಂಬರ್ ಇಲ್ಲವೇ ಡಿಸೆಂಬರ್ ವೇಳೆಗೆ ಮಧ್ಯಂತರ ಚುನಾವಣೆಗೆ ಹೋಗೋಣ. ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರೋಣ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಅವರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದರು.
ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತೈದು ಸ್ಥಾನಗಳನ್ನು ಗೆದ್ದಿರುವುದರಿಂದ ಮಧ್ಯಂತರ ಚುನಾವಣೆಯಲ್ಲಿ ರಾಜ್ಯದ ಇನ್ನೂರಾ ಇಪ್ಪತ್ನಾಲ್ಕು ಸೀಟುಗಳ ಪೈಕಿ ನೂರೈವತ್ತು,ನೂರಾ ಅರವತ್ತು ಸೀಟುಗಳನ್ನು ಗೆಲ್ಲಬಹುದು ಎಂಬುದು ಅಮಿತ್ಷಾ ಅವರ ವಾದವಾಗಿದೆ.
ಚುನಾವಣೆಯ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಅಮಿತ್ ಷಾ ಅವರ ಮಾತಿಗೆ ಎದುರಾಡದ ಬಿಜೆಪಿ ನಾಯಕರೀಗ ಏಕ್ದಂ ಧ್ವನಿ ಬದಲಿಸಿದ್ದು,ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಯಡಿಯೂರಪ್ಪ ನೇತೃತ್ವದಲ್ಲಿ ಪರ್ಯಾಯ ಸರ್ಕಾರ ರಚನೆಯಾಗುವಂತೆ ನೋಡಿಕೊಳ್ಳುವುದೇ ಸೂಕ್ತ ಎಂದು ವರಿಷ್ಟರಿಗೆ ಹೇಳತೊಡಗಿದ್ದಾರೆ.
ಮಧ್ಯಂತರ ಚುನಾವಣೆ ನಡೆಯುವವರೆಗೆ ಕಾದರೆ ಪರಿಸ್ಥಿತಿ ಉಲ್ಟಾ ಕೂಡಾ ಆಗಬಹುದು.ಅದೇ ರೀತಿ ಯಡಿಯೂರಪ್ಪ ಅವರಿಗೆ ಸಿಎಂ ಹುದ್ದೆ ತಪ್ಪಿಸಲು ಹೈಕಮಾಂಡ್ ಬಯಸುತ್ತಿದೆ ಎಂಬ ತಪ್ಪು ಸಂದೇಶವೂ ರವಾನೆಯಾಗಬಹುದು ಎಂಬುದು ಖುದ್ದು ಯಡಿಯೂರಪ್ಪ ವಿರೋಧಿಗಳ ಅಭಿಪ್ರಾಯ.
ಯಡಿಯೂರಪ್ಪ ಅವರ ಕೈಗೆ ಅಧಿಕಾರ ನೀಡಿ,ಅವರು ಭವಿಷ್ಯದಲ್ಲಿ ತಾವಾಗಿಯೇ ಅಧಿಕಾರ ಸಾಕು ಎಂದು ಬಯಸುವವರೆಗೆ ಮುಂದುವರಿಯಲಿ. ಇಲ್ಲದಿದ್ದರೆ ಬಿಜೆಪಿಯ ಬೆನ್ನೆಲುಬಾಗಿರುವ ಸಮುದಾಯ ಕಾಂಗ್ರೆಸ್ ಕಡೆ ವಾಲಬಹುದು.
ಯಡಿಯೂರಪ್ಪ ಅವರಿಗೆ ಸಿಎಂ ಹುದ್ದೆ ತಪ್ಪಿಸುವ ಸಲುವಾಗಿಯೇ ಮಧ್ಯಂತರ ಚುನಾವಣೆಯವರೆಗೆ ಕಾಲ ತಳ್ಳಲಾಗಿದೆ ಎಂದರೆ ಪರಿಸ್ಥಿತಿಯ ಲಾಭ ಕಾಂಗ್ರೆಸ್ ಪಕ್ಷದ ನಾಯಕ ಎಂ.ಬಿ.ಪಾಟೀಲ್ ಅವರಿಗಾಗಬಹುದು.
ಅವರು ಭವಿಷ್ಯದ ಲಿಂಗಾಯತ ನಾಯಕರಾಗಿ ಕುಳಿತುಕೊಂಡರೆ ಮತ್ತು ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಜಾಗೃತಗೊಂಡಿರುವ ಕಾಂಗ್ರೆಸ್,ಜೆಡಿಎಸ್ ಪ್ರಬಲ ಪೈಪೋಟಿ ನೀಡಿದರೆ ಫಲಿತಾಂಶ ಏನು ಆಗಬಹುದು.
ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪರಿವರ್ತಿತವಾಗುತ್ತದೆ ಎಂದು ಹೇಳಲಾಗದು. ಯಾಕೆಂದರೆ 1985 ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿತ್ತು.
ಹೀಗಾಗಿ ಅದರ ನೈತಿಕ ಹೊಣೆ ಹೊತ್ತು ರಾಮಕೃಷ್ಣ ಹೆಗಡೆ ಅವರು ಮಧ್ಯಂತರ ಚುನಾವಣೆಗೆ ಹೋದಾಗ ಜನ ಕಾಂಗ್ರೆಸ್ ಪಕ್ಷವನ್ನೇ ತಿರಸ್ಕರಿಸಿ, ಜನತಾ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವಂತೆ ಮಾಡಿದ್ದರು.
ಆದ್ದರಿಂದ ಇತಿಹಾಸದ ಈ ಅಂಶವನ್ನು ಗಮನದಲ್ಲಿಟ್ಟು ಕೊಳ್ಳೋಣ ಮತ್ತು ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ತೊರೆದು ಬರಲು ಕಾಂಗ್ರೆಸ್ ಹಾಗೂ ಜೆಡಿಎಸ್ನ ಹತ್ತಕ್ಕೂ ಹೆಚ್ಚು ಶಾಸಕರು ತಯಾರಿರುವುದರಿಂದ ಅದರ ಲಾಭ ಪಡೆಯೋಣ ಎಂದು ಈ ನಾಯಕರು ದಿಲ್ಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ನಾಯಕರಿಗೆ ವಿವರಿಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.