ಬೆಂಗಳೂರು, ಮೇ 29-ನಾಳೆ 2ನೇ ಅವಧಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಸಂಪುಟಕ್ಕೆ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ವರಿಷ್ಠರ ಜೊತೆ ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವದೆಹಲಿಗೆ ತೆರಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಷಾ, ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಲವು ನಾಯಕರನ್ನು ಭೇಟಿಯಾಗಲಿರುವ ಅವರು, ಸಂಪುಟಕ್ಕೆ ಯಾರ್ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚಿಸಲಿದ್ದಾರೆ.
ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ನವದೆಹಲಿಗೆ ತೆರಳಿರುವ ಅವರು, ರಾಜ್ಯಕ್ಕೆ ಈ ಬಾರಿ ಸಂಪುಟದಲ್ಲಿ ಹೆಚ್ಚಿನ ಸ್ಥಾನ ನೀಡುವಂತೆ ಬೇಡಿಕೆಯ ಪಟ್ಟಿಯನ್ನು ಇಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿಯ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ ಕನಿಷ್ಠ ಪಕ್ಷ ರಾಜ್ಯದಿಂದ ಮೂವರಿಗೆ ಸಂಪುಟದರ್ಜೆ ಹಾಗೂ ಅಷ್ಟೇ ಸಂಖ್ಯೆಯ ರಾಜ್ಯ ಖಾತೆಗಳನ್ನು ನೀಡುವಂತೆ ಮನವಿ ಮಾಡಲಿದ್ದಾರೆ.
ಕರ್ನಾಟಕದಿಂದ ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್ ಆಯ್ಕೆಯಾಗಿರುವುದರಿಂದ ನಾಳೆ ಮೋದಿ ಸಂಪುಟದಲ್ಲಿ ಅವರಿಗೆ ಮಹತ್ವದ ಖಾತೆ ಸಿಗುವುದರಲ್ಲಿ ಅನುಮಾನವಿಲ್ಲ.
ನಿರ್ಮಲಾ ಸೀತಾರಾಮನ್ ಸಂಪುಟದರ್ಜೆ ಸಚಿವರಾದರೆ ರಾಜ್ಯದಿಂದ ಇಬ್ಬರು ಸಚಿವರಾಗುವ ಅವಕಾಶವಿದೆ. ಒಕ್ಕಲಿಗರ ಕೋಟಾದಲ್ಲಿ ಡಿ.ವಿ.ಸದಾನಂದಗೌಡ, ಪರಿಶಿಷ್ಟ ಜಾತಿ ಕೋಟಾದಲ್ಲಿ ಚಾಮರಾಜನಗರದ ವಿ.ಶ್ರೀನಿವಾಸ್ ಪ್ರಸಾದ್, ಇಲ್ಲವೇ ವಿಜಯಪುರದ ರಮೇಶ್ ಜಿಗಜಿಣಗಿ ಸಚಿವರಾಗುವ ಸಂಭವವಿದೆ.
ಇವೆಲ್ಲದರ ನಡುವೆ ಕಾಂಗ್ರೆಸ್ನ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ್ ಖರ್ಗೆಯನ್ನು ಅಚ್ಚರಿ ರೀತಿಯಲ್ಲಿ ಪರಾಭವಗೊಳಿಸಿರುವ ಡಾ.ಉಮೇಶ್ ಜಾಧವ್ ಸಚಿವರಾದರೂ ಅಚ್ಚರಿಯಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬಾರಿ ವೀರಶೈವ ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿರುವುದರಿಂದ ಆ ಸಮುದಾಯದಿಂದ ಬೆಳಗಾವಿಯ ಸುರೇಶ್ ಅಂಗಡಿ, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್ ಇಲ್ಲವೆ ಹಾವೇರಿಯ ಶಿವಕುಮಾರ್ ಉದಾಸಿ ಸಚಿವರಾಗುವ ಸಂಭಾವ್ಯ ಪಟ್ಟಿಯಲ್ಲಿದ್ದಾರೆ.
ಬ್ರಾಹ್ಮಣ ಸಮುದಾಯದಿಂದ ಉತ್ತರ ಕನ್ನಡದ ಸಂಸದ ಅನಂತ್ಕುಮಾರ್ ಹೆಗಡೆ, ಧಾರವಾಡದ ಪ್ರಹ್ಲಾದ್ ಜೋಷಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಈ ಬಾರಿ ಸಂಪುಟಕ್ಕೆ ಮೋದಿಯವರು ಕೆಲ ಯುವಕರನ್ನು ಸೇರಿಸಿಕೊಳ್ಳಲು ತೀರ್ಮಾನಿಸಿರುವುದರಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಗೆದ್ದಿರುವ ಪ್ರತಾಪ್ಸಿಂಹಗೆ ಅದೃಷ್ಟ ಒಲಿದರೂ ಅಚ್ಚರಿಯಿಲ್ಲ.
ಇನ್ನು ಮಹಿಳಾ ಕೋಟಾದಲ್ಲಿ ಎರಡನೇ ಬಾರಿ ಉಡುಪಿ-ಚಿಕ್ಕಮಗಳೂರು ಜಿಲ್ಲೆಯಿಂದ ಗೆದ್ದಿರುವ ಶೋಭಾಕರಂದ್ಲಾಜೆ ಸಚಿವರಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಈ ಬಾರಿ ಕೇಂದ್ರ ವರಿಷ್ಠರು ಯಡಿಯೂರಪ್ಪನವರ ಮಾತಿಗೆ ಮಣೆ ಹಾಕಲೇಬೇಕಾದ ಅನಿವಾರ್ಯತೆ ಇದೆ.
ಅವರನ್ನು ಯಾವ ಹಂತದಲ್ಲೂ ಕಡೆಗಣಿಸುವ ಸಾಧ್ಯತೆಗಳಿಲ್ಲ. ಹಾಗಾಗಿಯೇ ಬಿಎಸ್ವೈ ಇಂದು ದೆಹಲಿಗೆ ದೌಡಾಯಿಸಿದ್ದಾರೆ.
ಇಂದು ಸಂಜೆಯೊಳಗೆ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ. ಈಗಾಗಲೇ ಎಲ್ಲ ಸಂಸದರಿಗೂ ದೆಹಲಿಗೆ ಬರುವಂತೆ ಪಕ್ಷದ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.