ಬೆಂಗಳೂರು, ಮೇ 29- ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಟವರ್ ಅಳವಡಿಕೆಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟವರ್ ಅಳವಡಿಕೆಗೆ ಪ್ರತ್ಯೇಕ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ನೀತಿಯೊಂದನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು. ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರೆ ಸಾಲದು, ಟವರ್ ಅಳವಡಿಸಲೂ ಅನುಮತಿ ಪಡೆಯಬೇಕು. ಅದಕ್ಕೂ ಶುಲ್ಕ ವಿಧಿಸಲಾಗುವುದು ಎಂದು ಹೇಳಿದರು.
ಶಾಲೆ, ಆಸ್ಪತ್ರೆಗಳಿಂದ ನಿರ್ದಿಷ್ಟ ದೂರದಲ್ಲಿರಬೇಕು. ಟವರ್ನಿಂದ ಉಂಟಾಗುವ ರೇಡಿಯೇಷನ್ ಪರಿಗಣಿಸಿ ಅನುಮತಿ ನೀಡಲಾಗುವುದು. ಈ ಸಂಬಂಧ ನೀತಿಯೊಂದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಪಿಜಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾನೂನು ತರಲಾಗುವುದು. ಪಿಜಿ ನಿವಾಸಿಗಳಿಗೆ ಭದ್ರತೆ ಹಾಗೂ ವಂಚನೆಯಾಗದಂತೆ ತಡೆಯುವ ಉದ್ದೇಶದಿಂದ ಹೊಸ ಕಾನೂನು ತರಲಾಗುತ್ತದೆ ಎಂದು ಹೇಳಿದರು.
ಆನ್ಲೈನ್ ಅನುಮತಿ: ಕಟ್ಟಡ ನಿರ್ಮಾಣ, ಬಡಾವಣೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವ ಹೊಸ ಯೋಜನೆಯನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು. ಇದಕ್ಕೆ ಪ್ರತ್ಯೇಕವಾದ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದು, ಅರ್ಜಿದಾರರು ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸರಿಯಿರದಿದ್ದರೆ ಸ್ವೀಕೃತಿ ಹಂತದಲ್ಲೇ ತಿರಸ್ಕøತವಾಗುತ್ತದೆ ಎಂದು ಹೇಳಿದರು.
ಸುಮಾರು 14 ವಿವಿಧ ಎನ್ಒಡಿ ಪಡೆಯಲು ಅಲೆದಾಡುವ, ವಿಳಂಬ ಮಾಡುವ ಮಧ್ಯವರ್ತಿಗಳ ಕಿರುಕುಳ ಇಲ್ಲ. ಒಂದು ತಿಂಗಳೊಳಗಾಗಿ ಲೈಸೆನ್ಸ್ ಅರ್ಜಿದಾರರಿಗೆ ದೊರೆಯಲಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ದಿನವೇ ಮಾಹಿತಿ ಆನ್ಲೈನ್ನಲ್ಲೇ ರವಾನಿಸಲಾಗುತ್ತದೆ ಎಂದರು.
ಸ್ಥಳ ಪರಿಶೀಲನೆಯನ್ನು ಜಂಟಿಯಾಗಿ ಮಾಡಬೇಕಾಗಿದ್ದು, ಆ ದಿನಾಂಕವನ್ನು ಕಂಪ್ಯೂಟರ್ರೇ ನಿಗದಿ ಮಾಡಲಿದೆ. ಅರ್ಜಿದಾರರಿಗೆ ಈ ಬಗ್ಗೆ ಮೊದಲೇ ಮಾಹಿತಿ ದೊರೆಯಲಿದೆ. ಮೊಬೈಲ್ ಆ್ಯಪ್ ಮೂಲಕವೇ ಸ್ಥಳ ಪರಿಶೀಲನೆ ಮಾಹಿತಿಯನ್ನು ಅಧಿಕಾರಿಗಳು ಅಪ್ಲೋಡ್ ಮಾಡುತ್ತಾರೆ ಎಂದು ಹೇಳಿದರು.
ವಿಷನ್ 20-25ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ತಲಾ 125 ರಿಂದ 150 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಒಳ ಚರಂಡಿ ನಿರ್ವಹಣೆಯನ್ನು ಇನ್ನು ಮುಂದೆ ಇಲಾಖೆಯೇ ನಿರ್ವಹಿಸಲು ನಿರ್ಧರಿಸಲಾಗಿದೆ.
ಸಣ್ಣ ನಗರಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಸಾವಿರ ಕೋಟಿ ರೂ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಒಂದೂವರೆ ಸಾವಿರ ಕೋಟಿ ರೂ. ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಬೇಕಿದೆ ಎಂದು ಖಾದರ್ ತಿಳಿಸಿದರು.