ಬೆಂಗಳೂರು; ತಮ್ಮ ಗತ್ತು ಗೈರತ್ತಿನಿಂದಲೇ ಹೆಸರಾಗಿದ್ದ ಹಾಗೂ ಆ ಮೂಲಕವೇ ರೆಬಲ್ ಸ್ಟಾರ್ ಎಂದು ಖ್ಯಾತಿ ಪಡೆದಿದ್ದ ದಿವಂಗತ ನಟ ಮಾಜಿ ಸಚಿವ ಅಂಬರೀಶ್ ಅವರಿಗೆ ಇಂದು 67ನೇ ಹುಟ್ಟುಹಬ್ಬ. ಅವರಿಲ್ಲದ ಮೊದಲ ಹುಟ್ಟುಹಬ್ಬ. ಪ್ರತಿ ವರ್ಷ ಅಂಬರೀಶ್ ಹುಟ್ಟುಹಬ್ಬ ಎಂದರೆ ಅವರ ಮನೆಯ ಮುಂದೆ ಅಭಿಮಾನಿಗಳ ದೊಡ್ಡ ದಂಡೆ ನೆರೆದಿರುತ್ತಿತ್ತು. ಎಲ್ಲರೂ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ, ಅವರಿಂದು ನಮ್ಮ ಜೊತೆ ಇಲ್ಲ. ಅದೇ ನೋವಿನಲ್ಲಿ ಅಭಿಮಾನಿಗಳು ಅವರ ಸಮಾಧಿಯತ್ತ ತೆರಳಿ ತಮ್ಮ ನೆಚ್ಚಿನ ನಟನಿಗೆ ಶುಭಕೋರುತ್ತಿದ್ದಾರೆ.
ಮಂಡ್ಯದ ಗಂಡು ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಮುಂಜಾನೆಯಿಂದಲೂ ಅವರ ಸಮಾಧಿಯತ್ತ ಆಗಮಿಸುತ್ತಿರುವ ಅಭಿಮಾನಿಗಳು ಸಮಾಧಿಗೆ ತರಹೇವಾರಿ ಹೂವಿನ ಅಲಂಕಾರ ಮಾಡಿದ್ದಾರೆ. ಅಲ್ಲಿಗೆ ಬರುವವರಿಗೆ ಊಟ ಹಾಗೂ ಸಿಹಿ ಹಂಚುವ ಕಾರ್ಯಕ್ರಮವೂ ಜೋರಾಗಿಯೇ ನಡೆದಿದೆ. ಅಲ್ಲದೆ ಅಂಬಿ ನೆನಪಿನಲ್ಲಿ ರಕ್ತದಾನ, ನೇತ್ರದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ.
ನೂತನ ಸಂಸದೆ ನಟಿ ಸುಮಲತಾ ಹಾಗೂ ನಟ ಅಭಿಷೇಕ್ ಸಮಾಧಿ ಬಳಿ ಆಗಮಿಸಲಿದ್ದಾರೆ. ಅಲ್ಲದೆ ಇಲ್ಲಿ ಪೂಜೆ ಮುಗಿದ ಬಳಿಕ ಮಂಡ್ಯ ಜಿಲ್ಲೆಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ.
ಮಂಡ್ಯದಲ್ಲಿ ಇಂದು ಸ್ವಾಭಿಮಾನಿ ವಿಜಯೋತ್ಸವ ; ಮಂಡ್ಯ ಖ್ಯಾತ ನಟ ಅಂಬರೀಶ್ ಅವರ ತವರು ಜಿಲ್ಲೆ. ನಟನಾಗಿ ಶಾಸಕನಾಗಿ ಸಂಸದನಾಗಿ ಹಾಗೂ ಸಚಿವನಾಗಿ ಹೀಗೆ ಎಲ್ಲಾ ರಂಗದಲ್ಲೂ ಅಂಬರೀಶ್ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದ ಜಿಲ್ಲೆ. ಇದೇ ಜಿಲ್ಲೆಯಲ್ಲಿ ನಡೆದ 2019ರ ಲೋಕಸಭಾ ಚುನಾವನೆಯನ್ನು ಸ್ವಾಭಿಮಾನಿ ಚುನಾವಣೆ ಎಂದೇ ಬಣ್ಣಿಸಲಾಗಿತ್ತು.
ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟಿ ಸುಮಲತಾ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸಿದ್ದರು. ಈ ಜಿದ್ದಾಜಿದ್ದಿ ಹೋರಾಟದಲ್ಲಿ ಕೊನೆಗೂ ಸುಮಲತಾ ಅವರಿಗೆ ಗೆಲುವಾಗಿತ್ತು. ಚುನಾವಣಾ ಫಲಿತಾಂಶದ ಮರು ದಿನವೇ ಅಂಬಿ ಸಮಾಧಿಯ ಮುಂದೆ ಘೋಷಣೆ ನೀಡಿದ ಸುಮಲತಾ ಮೇ.29ರ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಸ್ವಾಭಿಮಾನಿ ವಿಜಯೋತ್ಸವದ ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದರು.
ಅದರಂತೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿ ಬಳಿ ತೆರಳಲಿರುವ ಸುಮಲತಾ ನಂತರ ಮಂಡ್ಯಕ್ಕೆ ತೆರಳಿ ಅಂಬಿ ಹುಟ್ಟುಹಬ್ಬವನ್ನು ಸ್ವಾಭಿಮಾನಿಗಳ ವಿಜಯೋತ್ಸವ ಎಂದು ಆಚರಿಸಲಿದ್ದಾರೆ.