ಸತತ ಐದನೇ ಬಾರಿಗೆ ಓಡಿಶಾ ಮುಖ್ಯಮಂತ್ರಿಯಾಗಿ ನವೀನ್ ಪಟ್ನಾಯಕ್​ ಪ್ರಮಾಣ ವಚನ ಸ್ವೀಕಾರ

ಭುಬನೇಶ್ವರಒಡಿಶಾದಲ್ಲಿ ನವೀನ್ ಪಟ್ನಾಯಕ್​ ನೇತೃತ್ವದ ಬಿಜು ಜನತಾ ದಳ ಪಕ್ಷವನ್ನು ಜನರು ಮತ್ತೊಮ್ಮೆ ಪ್ರಚಂಡ ಬಹುಮತದೊಂದಿಗೆ ಆಯ್ಕೆ ಮಾಡಿದ್ದಾರೆ. ಪಕ್ಷದ ನೇತಾರ ಪಟ್ನಾಯಕ್​ ಸತತ ಐದನೇ ಅವಧಿಗೆ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕರಾವಳಿ ರಾಜ್ಯಗಳಲ್ಲಿ ಅತೀ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕೀರ್ತಿಗೆ ನವೀನ್ ಪಟ್ನಾಯಕ್ ಭಾಜನರಾಗಿದ್ದಾರೆ.

ನವೀನ್​ ಪಟ್ನಾಯಕ್​ ಮತ್ತು ಅವರ ಸಂಪುಟ ಸದಸ್ಯರು ಇಂದು ರಾಜ್ಯಪಾಲ ಗಣೇಶಿ ಲಾಲ್​ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಭುಬನೇಶ್ವರದಲ್ಲಿರುವ ರಾಜ್ಯಪಾಲ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕರು ಭವನದ ಎದುರು ಕಿಕ್ಕಿರಿದು ತುಂಬಿದ್ದರು.

ಮುಖ್ಯಮಂತ್ರಿಯಾಗಿ ನವೀನ್ ಪಟ್ನಾಯಕ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಅವರ ಶಿಫಾರಸ್ಸಿನಂತೆ 11 ಮಂದಿ ಕ್ಯಾಬಿನೆಟ್​ ದರ್ಜೆಯ ಸಚಿವರು ಮತ್ತು ಒಂಭತ್ತು ಮಂದಿ ರಾಜ್ಯ ಖಾತೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿಯ ಸಚಿವ ಸಂಪುಟದಲ್ಲಿ 10 ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಟ್ನಾಯಕ್​ ಅವರ ಅಣ್ಣ ಮತ್ತು ಉದ್ಯಮಿ ಪ್ರೇಮ್​ ಪಟ್ನಾಯಕ್​, ತಂಗಿ ಮತ್ತು ಹೆಸರಾಂತ ಲೇಖಕಿ ಗೀತಾ ಮೇಹ್ತಾ ಹಾಗೂ ನಾಯಕರು ಸೇರಿದಂತೆ 7 ಸಾವಿರ ಗಣ್ಯರು ಹಾಜರಿದ್ದರು. ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಪಟ್ನಾಯಕ್​ ಪುರಿಯಲ್ಲಿರುವ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು.

ಓಡಿಶಾದ 147 ಸದಸ್ಯ ಬಲ ವಿಧಾನಸಭೆಯಲ್ಲಿ ಪಟ್ನಾಯಕ್​ ನೇತೃತ್ವದ ಬಿಜೆಡಿ 112 ಸ್ಥಾನಗಳನ್ನು ಪಡೆದುಕೊಂಡಿದೆ. 2000 ದಿಂದ ಈ ರಾಜ್ಯದಲ್ಲಿ ಬಿಜೆಡಿ ಅಧಿಕಾರದಿಂದ ಇದೆ.

ಇಂದಿನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪಟ್ನಾಯಕ್ ಅವರು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಆದರೆ, ಅವರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಓಡಿಶಾದಲ್ಲಿ ಗೆಲುವು ಸಾಧಿಸಿದ ಬಳಿಕ ಪಟ್ನಾಯಕ್ ಅವರಿಗೆ ಮೋದಿ ಅವರು ಟ್ವಿಟರ್​ನಲ್ಲಿ ಶುಭ ಹಾರೈಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ