ಭುಬನೇಶ್ವರ: ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಪಕ್ಷವನ್ನು ಜನರು ಮತ್ತೊಮ್ಮೆ ಪ್ರಚಂಡ ಬಹುಮತದೊಂದಿಗೆ ಆಯ್ಕೆ ಮಾಡಿದ್ದಾರೆ. ಪಕ್ಷದ ನೇತಾರ ಪಟ್ನಾಯಕ್ ಸತತ ಐದನೇ ಅವಧಿಗೆ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕರಾವಳಿ ರಾಜ್ಯಗಳಲ್ಲಿ ಅತೀ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕೀರ್ತಿಗೆ ನವೀನ್ ಪಟ್ನಾಯಕ್ ಭಾಜನರಾಗಿದ್ದಾರೆ.
ನವೀನ್ ಪಟ್ನಾಯಕ್ ಮತ್ತು ಅವರ ಸಂಪುಟ ಸದಸ್ಯರು ಇಂದು ರಾಜ್ಯಪಾಲ ಗಣೇಶಿ ಲಾಲ್ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಭುಬನೇಶ್ವರದಲ್ಲಿರುವ ರಾಜ್ಯಪಾಲ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕರು ಭವನದ ಎದುರು ಕಿಕ್ಕಿರಿದು ತುಂಬಿದ್ದರು.
ಮುಖ್ಯಮಂತ್ರಿಯಾಗಿ ನವೀನ್ ಪಟ್ನಾಯಕ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಅವರ ಶಿಫಾರಸ್ಸಿನಂತೆ 11 ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರು ಮತ್ತು ಒಂಭತ್ತು ಮಂದಿ ರಾಜ್ಯ ಖಾತೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿಯ ಸಚಿವ ಸಂಪುಟದಲ್ಲಿ 10 ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಟ್ನಾಯಕ್ ಅವರ ಅಣ್ಣ ಮತ್ತು ಉದ್ಯಮಿ ಪ್ರೇಮ್ ಪಟ್ನಾಯಕ್, ತಂಗಿ ಮತ್ತು ಹೆಸರಾಂತ ಲೇಖಕಿ ಗೀತಾ ಮೇಹ್ತಾ ಹಾಗೂ ನಾಯಕರು ಸೇರಿದಂತೆ 7 ಸಾವಿರ ಗಣ್ಯರು ಹಾಜರಿದ್ದರು. ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಪಟ್ನಾಯಕ್ ಪುರಿಯಲ್ಲಿರುವ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು.
ಓಡಿಶಾದ 147 ಸದಸ್ಯ ಬಲ ವಿಧಾನಸಭೆಯಲ್ಲಿ ಪಟ್ನಾಯಕ್ ನೇತೃತ್ವದ ಬಿಜೆಡಿ 112 ಸ್ಥಾನಗಳನ್ನು ಪಡೆದುಕೊಂಡಿದೆ. 2000 ದಿಂದ ಈ ರಾಜ್ಯದಲ್ಲಿ ಬಿಜೆಡಿ ಅಧಿಕಾರದಿಂದ ಇದೆ.
ಇಂದಿನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪಟ್ನಾಯಕ್ ಅವರು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಆದರೆ, ಅವರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಓಡಿಶಾದಲ್ಲಿ ಗೆಲುವು ಸಾಧಿಸಿದ ಬಳಿಕ ಪಟ್ನಾಯಕ್ ಅವರಿಗೆ ಮೋದಿ ಅವರು ಟ್ವಿಟರ್ನಲ್ಲಿ ಶುಭ ಹಾರೈಸಿದ್ದರು.