ವಿಧಾನಸಭೆ ಚುನಾವಣೆ ವೇಳೆಗೆ ಮೋದಿ ಅಲೆ ಕಡಿಮೆಯಾಗುತ್ತದೆ-ಮಾಜಿ ಸಂಸದ ಕೆ.ಎಚ್.ಮುನಿಯಪ್ಪ

ಬೆಂಗಳೂರು, ಮೇ 29-ಲೋಕಸಭೆ ಚುನಾವಣೆಯಲ್ಲಿ ಎದಿದ್ದ ನರೇಂದ್ರ ಮೋದಿ ಹೆಸರಿನ ತೂಫಾನ್ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಕಡಿಮೆಯಾಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಆತಂಕಗೊಳ್ಳಬೇಕಿಲ್ಲ. ಪಕ್ಷ ಸಂಘಟನೆಯತ್ತ ಮತ್ತೊಮ್ಮೆ ತೊಡಗಿಸಕೊಳ್ಳೋಣ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕರೆ ನೀಡಿದ್ದಾರೆ.

ಕುಮಾರಕೃಪಾ ಅತಿಥಿ ಗೃಹದಲ್ಲಿಂದು ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಈ ರೀತಿಯ ತೂಫಾನ್‍ಗಳು ಬಹಳಷ್ಟು ಬಂದಿವೆ. ರಾಜೀವ್‍ಗಾಂಧಿ, ಇಂದಿರಾಗಾಂಧಿ ಕಾಲದಲ್ಲೂ ಈ ರೀತಿಯ ತೂಫಾನುಗಳು ಬಂದಿದ್ದವು. ಹೆಸರು, ವಿಳಾಸ ಗೊತ್ತಿಲ್ಲದೆ ಇದ್ದವರೂ ಕೂಡ ಕಾಂಗ್ರೆಸ್‍ನಿಂದ ಗೆದ್ದು ಬಂದಿರುವ ಉದಾಹರಣೆಗಳಿವೆ. ರಾಜಕೀಯದಲ್ಲಿ ಇದೆಲ್ಲ ಸರ್ವೇಸಾಮಾನ್ಯ. ಇದಕ್ಕೆ ಯಾರೂ ಹೆದರಬೇಕಿಲ್ಲ ಎಂದರು.

ಕಾಂಗ್ರೆಸ್ ಈಗಲೂ ಸದೃಢವಾಗಿದೆ. ಕೋಲಾರ ಕ್ಷೇತ್ರದಲ್ಲಿ ಈವರೆಗೂ ನನಗೆ ಸರಿಸುಮಾರು 4 ಲಕ್ಷ ಮತಗಳು ಬರುತ್ತಿದ್ದವು, ನಾನು ಗೆಲ್ಲುತ್ತಿದ್ದೆ. 15 ವಿಧಾನಸಭಾ ಚುನಾವಣೆಗಳಲ್ಲೂ ಬಹುತೇಕ ಕಾಂಗ್ರೆಸ್ ಗೆದ್ದಿದೆ. ಈ ಬಾರಿ ನನಗೆ ಈ ಹಿಂದಿಗಿಂತಲೂ ಹೆಚ್ಚು ಮತಗಳು ಬಂದಿದ್ದು, ಸುಮಾರು 5 ಲಕ್ಷ ಮಂದಿ ನನಗೆ ಮತ ಹಾಕಿದ್ದಾರೆ. ಆದರೂ ಸೋಲು ಕಂಡಿದ್ದೇನೆ. ಕಾರ್ಯಕರ್ತರು ಯಾರೂ ಹೆದರಬೇಕಿಲ್ಲ. ಜಿಲ್ಲೆಯಲ್ಲಿ ಮತ್ತೆ ನಾನು ಪಕ್ಷ ಸಂಘಟಿಸುತ್ತೇನೆ, ಮುಂದೆ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದ ಸೋಲಿನ ಕಾರಣಗಳ ಬಗ್ಗೆ ಸದ್ಯಕ್ಕೆ ನಾನು ಮಾತನಾಡುವುದಿಲ್ಲ. ಮುಂದೊಂದು ದಿನ ಸೂಕ್ತ ಸಂದರ್ಭದಲ್ಲಿ ಎಲ್ಲಾ ರೀತಿಯ ವಿವರಣೆಗಳನ್ನು ಕೊಡುತ್ತೇನೆ. ಸದ್ಯಕ್ಕೆ ನಮ್ಮ ಮುಂದಿರುವುದು ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಆಗತ್ಯತೆ. ಅದಕ್ಕೆ ಸೂಕ್ತವಾದ ಸಲಹೆಗಳನ್ನು ಇಂದು ನಾಯಕರಿಗೆ ನೀಡಿದ್ದೇನೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಮತ್ತೆ ಗೆದ್ದೇಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋಲಾರದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಸ್ವಪಕ್ಷದ ವಿರುದ್ಧವಾಗಿಯೇ ಕೆಲಸ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಖಂಡರು ಬರುತ್ತಾರೆ, ಹೋಗುತ್ತಾರೆ. ನಮಗೆ ಅವರು ಮುಖ್ಯವಲ್ಲ, ಕಾರ್ಯಕರ್ತರು ಮುಖ್ಯ. ಲೋಕಸಭೆ ಚುನಾವಣೆಯಲ್ಲಿ 5 ಲಕ್ಷ ಮಂದಿ ಮತ ಹಾಕಿದ್ದಾರೆ. ಪಕ್ಷ ತನ್ನ ಹಿಡಿತ ಕಳೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನ ಶಕ್ತಿ ಏನೆಂದು ತೋರಿಸುತ್ತೇನೆ ಎಂದು ಸವಾಲು ಹಾಕಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ