ಬೆಂಗಳೂರು, ಮೇ 29-ಆಪರೇಷನ್ ಕಮಲ ಮತ್ತು ಸಂಪುಟ ಪುನಾರಚನೆ ಕುರಿತು ಇಂದು ಸಮ್ಮಿಶ್ರ ಸರ್ಕಾರದ ದೋಸ್ತಿ ನಾಯಕರು ಮಹತ್ವದ ಸಭೆ ನಡೆಸಿದ್ದಲ್ಲದೆ, ಸರ್ಕಾರ ಪತನಗೊಳಿಸಲು ಯತ್ನಿಸುತ್ತಿರುವ ಬಿಜೆಪಿಗೆ ಸೆಡ್ಡುಹೊಡೆಯಲು ನಿರ್ಧರಿಸಿದ್ದಾರೆ.
ನಗರದ ಕುಮಾರಕೃಪಾದಲ್ಲಿಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎಂ.ಬಿ.ಪಾಟೀಲ್ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಮತ್ತಿತರರು ಮಹತ್ವದ ಸಭೆ ನಡೆಸಿದರು.
ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಪಕ್ಷಗಳಿಗೆ ಹೀನಾಯ ಸೋಲಿನ ಬಗ್ಗೆಯೂ ಸಭೆಯಲ್ಲಿ ಪರಾಮರ್ಶೆ ನಡೆಯಿತು. ಸಮ್ಮಿಶ್ರ ಸರ್ಕಾರದ ಮುಂದೆ ಸದ್ಯಕ್ಕಿರುವ ಸವಾಲೆಂದರೆ ಕಾಂಗ್ರೆಸ್ನ ಅತೃಪ್ತರನ್ನು ಸಮಾಧಾನಪಡಿಸಿ ಸರ್ಕಾರ ಉಳಿಸಿಕೊಳ್ಳುವುದು. ಕೇಂದ್ರದಲ್ಲಿ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕರ್ನಾಟಕದಲ್ಲಿ ಆಪರೇಷನ್ ಕಮಲ ಹಾಗೂ ಇತರ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುವ ಸಾಧ್ಯತೆಗಳಿವೆ.
ಮೂಲಗಳ ಪ್ರಕಾರ ಬಿಜೆಪಿಯ ಹೈಕಮಾಂಡ್ ಈ ಹಿಂದಿನಂತೆ ಮೀನಾಮೇಷ ಎಣಿಸದೆ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಡುತ್ತದೆ ಎಂಬ ಮಾಹಿತಿಗಳಿವೆ. ಅಂತಹ ಸಂದರ್ಭ ಎದುರಾದರೆ ಕೇಂದ್ರ ಸರ್ಕಾರದ ನೇತೃತ್ವದಲ್ಲೇ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನಗಳು ನಡೆಯುವ ಸಾಧ್ಯತೆಗಳಿವೆ.
ಬಿಜೆಪಿ ರಾಜಕೀಯ ಚದುರಂಗದಾಟ ಆರಂಭಿಸುವ ಮುನ್ನವೇ ತನ್ನ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಮುಂದಾಗಿದ್ದಾರೆ. ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ.
ಬಹಳಷ್ಟು ಶಾಸಕರು ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಸಚಿವರಿಂದ ಕಾಂಗ್ರೆಸ್ ಶಾಸಕರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ. ಈ ರೀತಿಯ ಆರೋಪಗಳನ್ನು ಸರಿಪಡಿಸಿ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ನಾಯಕರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಆಪರೇಷನ್ ಕಮಲಕ್ಕೆ ತುತ್ತಾಗುವ ಸಾಧ್ಯತೆ ಇರುವ ಕೆಲವು ಶಾಸಕರುಗಳನ್ನು ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಸಂಪರ್ಕ ಮಾಡಿದ್ದು, ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾದಂತಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರು ನಡೆಸಿರುವ ಚರ್ಚೆಗಳು, ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿರುವ ಚರ್ಚೆಗಳು ಇವೆಲ್ಲವನ್ನು ಕ್ರೋಢೀಕರಿಸಿ ಸಮಗ್ರವಾದ ರಣತಂತ್ರ ರೂಪಿಸಲು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಶತಾಯಗತಾಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಡಬಾರದು. ಬಿಜೆಪಿ ಆಪರೇಷನ್ ಕಮಲ ಮಾಡಿದ್ದೇ ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ಪಕ್ಷಗಳು ಕೂಡ ಬಿಜೆಪಿ ಶಾಸಕರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ.
ಮಹತ್ವದ ಸಭೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆದಿದ್ದು, ಯಾವೆಲ್ಲ ಸಚಿವರನ್ನು ಕೈಬಿಡಬೇಕು, ಹೊಸದಾಗಿ ಯಾರನ್ನು ಸಚಿವರನ್ನಾಗಿ ಸೇರಿಸಿಕೊಳ್ಳಬೇಕು ಎಂಬ ಚರ್ಚೆಗಳು ನಡೆದಿವೆ.
ಜೆಡಿಎಸ್ ತನ್ನ ಪಾಲಿನ ಒಂದೆರಡು ಸಚಿವ ಸ್ಥಾನಗಳನ್ನು ಕಾಂಗ್ರೆಸ್ಗೆ ತ್ಯಾಗ ಮಾಡಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿ ಬಂದಿವೆ ಎಂದು ಹೇಳಲಾಗಿದೆ.
ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಸರ್ಕಾರವನ್ನು ರಕ್ಷಿಸಿಕೊಳ್ಳಲು ದೋಸ್ತಿ ನಾಯಕರು ನೇರವಾಗಿ ಅಖಾಡಕ್ಕಿಳಿದು ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ.
ಸಚಿವ ಯು.ಟಿ. ಖಾದರ್, ಮಾಜಿ ಸಂಸದರಾದ ಧ್ರುವನಾರಾಯಣ್, ಬಿ.ಎಸ್.ಚಂದ್ರಪ್ಪ, ಕೆ.ಎಚ್.ಮುನಿಯಪ್ಪ, ಬಿ.ವಿ.ನಾಯಕ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.