ಬೆಂಗಳೂರು, ಮೇ 28- ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವವರು ಹಾಗೂ ತಂಬಾಕು ಜಿಗಿಯುವವರಿಗೆ ವಿಧಿಸುವ ದಂಡದ ಪ್ರಮಾಣ 200ರೂ.ನಿಂದ ಎರಡು ಸಾವಿರ ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಂಬಾಕು ನಿಯಂತ್ರಣಾಧಿಕಾರಿ ಡಾ.ಶ್ರೀನಿವಾಸ್ ಇಂದಿಲ್ಲಿ ಅಭಿಪ್ರಾಯಪಟ್ಟರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೆ.ಸಿ.ಜನರಲ್ ಆಸ್ಪತ್ರೆ ಸಹಯೋಗದಲ್ಲಿ ವಾರ್ತಾಸೌಧದಲ್ಲಿಂದು ಹಮ್ಮಿಕೊಂಡಿದ್ದ ತಂಬಾಕು ನಿಯಂತ್ರಣ ಕಾನೂನು ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಹಿರಿಯರು ತಂಬಾಕು ಜಿಗಿಯುವುದನ್ನು ಆರಂಭಿಸಿದಾಗಿನಿಂದ ತಂಬಾಕು ಉತ್ಪನ್ನ ಇದೀಗ ರೋಗಗಳನ್ನು ತಂದುಕೊಳ್ಳುವವರೆಗೂ ಬಂದು ನಿಂತಿದೆ. ತಂಬಾಕು ಉತ್ಪನ್ನ ಸೇವಿಸಿ ಬಹಳಷ್ಟು ಮಂದಿ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದಾರೆ. ಇದರಿಂದ ಪ್ರತಿ ವರ್ಷ ಎರಡು ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ.ಇಡೀ ವಿಶ್ವದಲ್ಲೇ ಸಾವನ್ನಪ್ಪುತ್ತಿರುವ 10 ಮಂದಿಯಲ್ಲಿ ಒಬ್ಬ ತಂಬಾಕು ಸೇವಿಸುವ ವ್ಯಕ್ತಿ ಇರುತ್ತಾನೆ. ಇದನ್ನು ಮನಗಂಡು ವಿಶ್ವ ಆರೋಗ್ಯ ಸಂಸ್ಥೆ ಮೇ 31ಅನ್ನು ತಂಬಾಕು ರಹಿತ ದಿನವನ್ನಾಗಿ ಘೋಷಣೆ ಮಾಡಿದೆ.ನಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ಪುನರ್ಮನನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ತಂಬಾಕು ಸೇವನೆಯಿಂದ ದೇಹದ ಮೇಲೆ ಆಗುವ ದುಷ್ಪರಿಣಾಮಗಳು, ಸಿಗರೇಟಿನ ಹೊಗೆ ಸೇವಿಸುವವರಿಗೆ ಆಗುವ ಮಾರಕ ಪರಿಣಾಮ ಕುರಿತು ಇಂದು ಚರ್ಚಿಸಿದ್ದೇವೆ. ಮೇ 31ರಂದು ತಂಬಾಕು ರಹಿತ ದಿನವನ್ನು ರೋಸ್ ಡೇ ಆಗಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ನಗರದ ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತಿತರ ಆರೋಗ್ಯ ಕೇಂದ್ರಗಳಲ್ಲಿನ ಸಿಬ್ಬಂದಿಗಳು ಅಂದು ತಂಬಾಕು ದುಷ್ಪರಿಣಾಮ ಕುರಿತು ಜಾಥಾ ನಡೆಸುತ್ತಾರೆ. ತಂಬಾಕು ಸೇದುವವರಿಗೆ ಹಾಗೂ ಸುತ್ತಮುತ್ತಲಿನವರಿಗೆ ರೋಸ್ ಕೊಟ್ಟು ತಿಳುವಳಿಕೆ ಮೂಡಿಸುತ್ತಾರೆ.ಅಲ್ಲದೆ, ಸಿಗರೇಟು ಮತ್ತಿತರ ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೂ ಗುಲಾಬಿ ಕೊಟ್ಟು ಇಂದು ಒಂದು ದಿನವಾದರೂ ಇವುಗಳನ್ನು ಮಾರಾಟ ಮಾಡಬೇಡಿ ಎಂದು ಮನವಿ ಮಾಡಲಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳು, ಕೆ.ಸಿ.ಜನರಲ್ ಆಸ್ಪತ್ರೆ ಮತ್ತಿತರ ಪ್ರದೇಶಗಳನ್ನು ತಂಬಾಕು ಮುಕ್ತ ಪ್ರದೇಶಗಳೆಂದು ಬೋರ್ಡ್ ಹಾಕುತ್ತೇವೆ ಎಂದು ತಿಳಿಸಿದರು.
ಧೂಮಪಾನ ಮಾಡುವುದಿಲ್ಲ. ತಂಬಾಕು ಉತ್ಪನ್ನ ಸೇವಿಸಿವುದಿಲ್ಲ ಎಂದು ಶಪಥ ಮಾಡಬೇಕು. ತಮ್ಮ ತಮ್ಮ ಮನೆಗಳಲ್ಲಿ ಯಾರಾದರು ಇಂತಹ ವೆಸನಿಗಳಿದ್ದರೆ ಅವರಿಗೂ ತಿಳುವಳಿಕೆ ನೀಡಬೇಕೆಂದು ಡಾ.ಶ್ರೀನಿವಾಸ್ ಕರೆ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿ ಡಾ.ಸಿರಾಜ್, ಡಾ.ಮಮತಾ, ಡಾ.ನದೀಮ್ ಮಹಮ್ಮದ್, ವಾರ್ತಾ ಇಲಾಖೆ ನಿರ್ದೇಶಕ ಮುರಳೀಧರ್ ಮತ್ತಿತರರು ಪಾಲ್ಗೊಂಡಿದ್ದರು.