ಬೆಂಗಳೂರು, ಮೇ 28- ಹಲವು ದಾಖಲೆಗಳನ್ನು ನಿರ್ಮಿಸಿರುವ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಘಟಾನುಘಟಿ ನಾಯಕರು ಪರಾಭವಗೊಂಡಿರುವ ಕಾರಣ ದೆಹಲಿಯಲ್ಲಿ ಕರ್ನಾಟಕದ ಧ್ವನಿಯೇ ಕ್ಷೀಣಿಸಿದಂತಾಗಿದೆ.
ನಾಡಿನ ನೆಲ, ಜಲ, ಭಾಷೆ, ಗಡಿ, ಇತಿಹಾಸ, ಸಂಸ್ಕøತಿ ಸೇರಿದಂತೆ ನಾನಾ ಸಮಸ್ಯೆಗಳು ಬಂದ ಸಂದರ್ಭದಲ್ಲಿ ಈವರೆಗೂ ಪಕ್ಷ ಭೇದ ಮರೆತು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಹಿರಿಯರು ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುತ್ತಿದ್ದರು.
ಆದರೆ, ಈ ಬಾರಿ ನರೇಂದ್ರ ಮೋದಿ ಅವರ ಅಲೆಯ ಮುಂದೆ ಸ್ವತಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (ತುಮಕೂರು), ಎಂ.ಮಲ್ಲಿಕಾರ್ಜುನ ಖರ್ಗೆ (ಕಲಬುರ್ಗಿ), ಕೆ.ಎಚ್.ಮುನಿಯಪ್ಪ(ಕೋಲಾರ), ಎಂ.ವೀರಪ್ಪಮೊಯ್ಲಿ (ಚಿಕ್ಕಬಳ್ಳಾಪುರ), ಆರ್.ಧ್ರುವನಾರಾಯಣ (ಚಾಮರಾಜನಗರ) ಸೇರಿದಂತೆ ಹಲವರು ಪರಾಭಾವಗೊಂಡಿರುವ ಕಾರಣ ಸಂಸತ್‍ನಲ್ಲಿ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರು ಯಾರು ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಅದರಲ್ಲೂ ಪ್ರತಿ ವರ್ಷ ತಮಿಳುನಾಡು ಕಾವೇರಿ ವಿವಾದವನ್ನು ಇಟ್ಟುಕೊಂಡು ಕರ್ನಾಟಕದ ಮೇಲೆ ಸಂಸತ್‍ನಲ್ಲಿ ದಬ್ಬಾಳಿಕೆ ನಡೆಸುತ್ತಲೇ ಬಂದಿದೆ. ಇಂತಹ ಸಂದರ್ಭದಲ್ಲಿ ಎಚ್.ಡಿ.ದೇವೇಗೌಡ, ಖರ್ಗೆ ಸೇರಿದಂತೆ ಅನೇಕರು ಪಕ್ಷ ಭೇದ ಮರೆತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿದ ನಿದರ್ಶನಗಳು ಸಾಕಷ್ಟಿವೆ.
ಈ ಬಾರಿ ತಮಿಳುನಾಡಿನಲ್ಲಿ ಡಿಎಂಕೆ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ವಿಜೇತರಾಗಿದ್ದಾರೆ.ಎಐಎಡಿಎಂಕೆ ಪರಾಭವಗೊಂಡಿದೆ. ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಅವರ ಲಾಭಿ ಮಾತ್ರ ಎಂದಿಗೂ ನಿಲ್ಲುವುದಿಲ್ಲ. ಯಾರೇ ಪ್ರಧಾನಿಯಾಗಿರಲಿ, ಇನ್ಯಾರೇ ಇರಲಿ ಕಾವೇರಿ ನದಿ ವಿವಾದವನ್ನು ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳುವುದು ಹಲವಾರು ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ.
ತಮಿಳುನಾಡು ಕಾವೇರಿ ವಿವಾದವನ್ನು ಕೆದಕಿದರೆ, ನೆರೆಯ ಮಹಾರಾಷ್ಟ್ರ ಗಡಿ ವಿವಾದವನ್ನು ಈಗಲೂ ಜೀವಂತವಾಗಿಟ್ಟುಕೊಂಡಿದೆ. ಮಹಾಜನ್‍ವರದಿ ಅಂತಿಮ ಎಂದು ಕೇಂದ್ರ ಸರ್ಕಾರವೇ ಸಂಸತ್‍ನಲ್ಲಿ ಒಪ್ಪಿಕೊಂಡಿದೆ.ಆದರೆ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಈಗಲೂ ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಲೇ ಬರುತ್ತಿದೆ.
ಇತ್ತ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕೂಡ ಕೃಷ್ಣ ನದಿ ವಿವಾದದಲ್ಲಿ ಕರ್ನಾಟಕದ ಮೇಲೆ ಸವಾರಿ ಮಾಡುತ್ತಲೇ ಬಂದಿವೆ.
ಸಂಸತ್‍ನ ಉಭಯ ಸದನಗಳಲ್ಲಿ ಕರ್ನಾಟಕದ ಸಮಸ್ಯೆಗಳು ಬಂದಂತಹ ಸಂದರ್ಭದಲ್ಲಿ ಕಳೆದ ಎರಡು ದಶಕಗಳಿಂದ ದೇವೇಗೌಡರು ಎಲ್ಲಾ ಸಂಸದರನ್ನು ಒಟ್ಟು ಗೂಡಿಸಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದರು.
ಯಾವುದೇ ವಿಷಯ ವಿದ್ದರೂ ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ಅನಂತ್‍ಕುಮಾರ್ ಸೇರಿದಂತೆ ಮತ್ತಿತರರು ರಾಜ್ಯದ ವಿಷಯದಲ್ಲಿ ಪಕ್ಷ ಭೇದ ಮರೆತು ರಾಜ್ಯಕ್ಕೆ ನ್ಯಾಯ ಒದಗಿಸಲು ಮುಂಚೂಣಿಯಲ್ಲಿರುತ್ತಿದ್ದರು.
ಈಗ ಅನಂತ್‍ಕುಮಾರ್ ಇಲ್ಲದಿರುವುದು, ದೇವೇಗೌಡರು, ಖರ್ಗೆ, ಮುನಿಯಪ್ಪ, ವೀರಪ್ಪಮೊಯ್ಲಿ ಸೋತು ಸುಣ್ಣವಾಗಿರುವುದರಿಂದ ಕರ್ನಾಟಕಕ್ಕೆ ನ್ಯಾಯ ಸಿಗಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಅದರಲ್ಲೂ ಈ ಬಾರಿ ರಾಜ್ಯದಿಂದ ಅನೇಕ ಹೊಸ ಮುಖಗಳು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ತೇಜಸ್ವಿಸೂರ್ಯ, ಮುನಿಸ್ವಾಮಿ, ಎ.ನಾರಾಯಣಸ್ವಾಮಿ, ದೇವೇಂದ್ರಪ್ಪ, ಅಮರೇಶ್‍ನಾಯಕ್, ಉಮೇಶ್ ಜಾಧವ್, ಅಣ್ಣಾ ಸಾಹೇಬ್ ಜೊಲ್ಲೆ, ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದಾರೆ.
ಸೇವಾ ಹಿರಿತನದಲ್ಲಿ ಕರ್ನಾಟಕದಿಂದ ಡಿ.ವಿ.ಸದಾನಂದಗೌಡ ಮಾತ್ರ ಮೊದಲ ಮೂರು ಸಾಲಿನಲ್ಲಿ ಕಾಣಿಸಿಕೊಳ್ಳಬಹುದು. ಒಂದು ವೇಳೆ ವಿ.ಶ್ರೀನಿವಾಸ್‍ಪ್ರಸಾದ್ ಇಲ್ಲವೇ ರಮೇಶ್‍ಜಿಗಜಿಣಗಿ ಸಂಪುಟ ದರ್ಜೆಯ ಸಚಿವರಾದ ಇದೇ ಸ್ಥಾನದಲ್ಲಿರುತ್ತಾರೆ.
ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಡಿಎಂಕೆ ಕ್ಯಾತೆ ತೆಗೆದರೆ ಸದಾನಂದಗೌಡ ಅನಿವಾರ್ಯವಾಗಿ ರಾಜ್ಯವನ್ನು ಮುನ್ನಡೆಸುವ ಹೊಣೆಗಾರಿಕೆ ಹೊರಬೇಕಾಗುತ್ತದೆ.