ಬೆಂಗಳೂರು,ಮೇ 28- ರಾಜ್ಯದ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಜುಲೈ ಮೊದಲ ವಾರದಲ್ಲಿ ನಡೆಯಲಿದೆ.
ಆಡಳಿತ ಪಕ್ಷದ ಅತೃಪ್ತರನ್ನು ಸಮಾಧಾನಪಡಿಸಲು ಮುಂದಾಗಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರಕ್ಕೆ ಎದುರಾಗಲಿರುವ ಗಂಡಾಂತರವನ್ನು ದೂರ ಮಾಡಲು ಮುಂದಾಗಿದ್ದಾರೆ.
ಅತೃಪ್ತ ಶಾಸಕರು ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗುವುದನ್ನು ತಪ್ಪಿಸಲು, ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಉಭಯ ಪಕ್ಷಗಳ ನಾಯಕರು ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿ ಪೂರಕವಾದ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿವಿಗೆ ದೋಸ್ತಿ ನಾಯಕರು ಖಾಲಿ ಇರುವ ಸಚಿವರ ಸ್ಥಾನಗಳನ್ನು ಮೊದಲು ಭರ್ತಿ ಮಾಡಲು ತೀರ್ಮಾನಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಉಭಯ ನಾಯಕರು ಮೈತ್ರಿ ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.
ಜೊತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನವನ್ನು ಪಡೆದಿದ್ದಾರೆ.
ಜೂನ್ ಮೊದಲ ವಾರದೊಳಗೆ ಸಂಪುಟ ವಿಸ್ತರಣೆ ಮಾಡಬಹುದು ಎಂದು ಉನ್ನತ ಮೂಲಗಳು ತಿಳಿಸಿದ್ದು, ಆದರೆ ಸಂಪುಟ ವಿಸ್ತರಣೆಗೆ ಇನ್ನು ಮುಹೂರ್ತ ನಿಗದಿಪಡಿಸಿಲ್ಲ. ಅನುಕೂಲಕ್ಕೆ ತಕ್ಕಂತೆ ಸದ್ಯದಲ್ಲೇ ವಿಸ್ತರಣೆ ಮಾಡಲಾಗುತ್ತದೆ. ಮೂರು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ಕಾಂಗ್ರೆಸ್ನ ಅತೃಪ್ತರಿಗೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ನ ಒಂದು ಹಾಗೂ ಜೆಡಿಎಸ್ನಲ್ಲಿ ಎರಡು ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಈ ಮೂರು ಸ್ಥಾನಗಳನ್ನು ಭರ್ತಿ ಮಾಡಿ ಅಸಮಾಧಾನ ಹೋಗಲಾಡಿಸುವುದು ಮೈತ್ರಿ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಆಗಲೂ ಸರ್ಕಾರಕ್ಕೆ ಅತೃಪ್ತರ ಕಾಟ ಮುಂದುವರೆದರೆ ಸಚಿವ ಸಂಪುಟ ಪುನರ್ ರಚನೆ ಮಾಡುವ ಬಗ್ಗೆ ಗಮನಹರಿಸಲಾಗುತ್ತದೆ.
ಈಗಲೇ ಸಂಪುಟ ಪುನಾರಚನೆ ಮಾಡಲು ಕಾಂಗ್ರೆಸ್ನ ಬಹಳಷ್ಟು ಸಚಿವರು, ನಾಯಕರು ಸಹಮತ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.
ಸಂಪುಟ ಪುನಾರಚನೆ ಮಾಡಿದರೆ ಮತ್ತೊಂದು ಸಮಸ್ಯೆ ಎಳೆದುಕೊಂಡಂತಾಗುತ್ತದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹಿಂದೇಟು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಉಳಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದಿರುವ ಜೆಡಿಎಸ್ ತನ್ನ ಎರಡೂ ಸಚಿವ ಸ್ಥಾನಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಸಿದ್ದವಾಗಿದೆ ಎಂದು ತಿಳಿದುಬಂದಿದೆ.
ಹಂಚಿಕೆಗೆ ಮುಖ್ಯವಾಗಿ ಸರ್ಕಾರ ಉಳಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಸರ್ಕಾರ ಪತನಗೊಂಡು ಬಿಜೆಪಿಗೆ ಅಧಿಕಾರ ನೀಡಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಜೆಡಿಎಸ್-ಕಾಂಗ್ರೆಸ್ ನಾಯಕರು ಶತಾಯಗತಾಯ ಪ್ರಯತ್ನ ನಡೆಸಿ ಮೈತ್ರಿ ಸರ್ಕಾರವನ್ನು ಭದ್ರಪಡಿಸಿಕೊಂಡು ಮುನ್ನಡೆಸಲು ಬೇಕಾಗಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಒಂದು ಪಕ್ಷಕ್ಕೆ ಹೆಚ್ಚು, ಒಂದು ಪಕ್ಷಕ್ಕೆ ಕಡಿಮೆಯಾದರೂ ಸಹಿಸಿಕೊಂಡು ಪರಸ್ಪರ ಸಹಕಾರದಿಂದ ಮುನ್ನಡೆಯುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.