ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡುವಂತೆ ರಾಹುಲ್ ಗಾಂಧಿ ಪಟ್ಟು

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನುಭವಿಸಿರುವ ಹಿನ್ನಲೆಯಲ್ಲಿ ಕಂಗೆಟ್ಟರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ರಾಜೀನಾಮೆ ನಿರ್ಧಾರದಿಂದ ಹಿಂದೆಸರಿಯುತ್ತಿಲ್ಲ. ತಮ್ಮ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡುವಂತೆ ರಾಹುಲ್ ಪಟ್ಟು ಹಿಡಿದಿದ್ದಾರೆ.

ತಾವು ರಾಜೀನಾಮೆ ನೀಡವುದಾಗಿ ಹೇಳುತ್ತಿರುವ ರಾಹುಲ್ ಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡುವಂತೆ ತಮ್ಮ ಆಪ್ತ ವರಿಷ್ಠ ನಾಯಕರಿಗೆ ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಹೊಸ ಸಂಸದರ ಸಭೆ ನಡೆಸಲು ಕೂಡ ನಿರಾಕರಿಸಿದ್ದಾರೆ. ದೇಶದ ಮೊದಲ ಪ್ರಧಾನಿ, ತಾತ ಜವಾಹರಲಾಲ್‌ ನೆರವು ಪುಣ್ಯ ತಿಥಿ ದಿನದಂದೇ ರಾಹುಲ್‌ ಗಾಂಧಿ ಈ ನಿರ್ಧಾರ ಕೈಗೊಂಡಿದ್ದಾರೆ.

ರಾಹುಲ್‌ ಮನಸ್ಸು ಬದಲಿಸಲು ತಾಯಿ ಸೋನಿಯಾ, ಸೋದರಿ ಪ್ರಿಯಾಂಕಾ ಕೂಡ ಮುಂದಾಗಿದ್ದಾರೆ. ಕೆಲವು ದಿನ ವಿಶ್ರಾಂತಿ ಪಡೆಯಲು ರಾಹುಲ್‌ಗೆ ಸಲಹೆ ನೀಡಿದ್ದಾರೆ.

ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಆತ್ಮಾವಲೋಕನ ಸಭೆಯಲ್ಲಿ ರಾಹುಲ್‌ ಗಾಂಧಿ ರಾಜೀನಾಮೆ ಪ್ರಸ್ತಾವ ಮುಂದಿಟ್ಟಿದ್ದರು. ಇದನ್ನು ವರಿಷ್ಠ ಮಂಡಳಿ ಸಾರಾಸಗಟಾಗಿ ತಿರಸ್ಕರಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ