ಬೆಂಬಲಿಗನ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಸ್ಮೃತಿ ಇರಾನಿ

ಲಕ್ನೋ: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿದ್ದ ಬಿಜೆಪಿಯ ಸ್ಮೃತಿ ಇರಾನಿ ಗೆಲುವಿನ ವಿಜಯೋತ್ಸವದ ವೇಳೆಯೇ ದುಷ್ಕರ್ಮಿಗಳ ಗುಂಡಿಗೆ ಸ್ಮೃತಿ ಇರಾನಿ ಬೆಂಬಲಿಗ ಸುರೇಂದ್ರ ಸಿಂಗ್ ಬಲಿಯಾಗಿದ್ದು, ಸುರೇಂದ್ರ ಅವರ ಪಾರ್ಥಿವ ಶರೀರಕ್ಕೆ ಸಂಸದೆ ಸ್ಮೃತಿ ಇರಾನಿ ಹೆಗಲು ಕೊಟ್ಟಿದ್ದಾರೆ.

ಅಮೇಥಿಯ ಬರೌಲಿಯಾ ಗ್ರಾಮದಲ್ಲಿ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಸಂಸದೆ ಸ್ಮೃತಿ ಇರಾನಿ ಅವರು ಶವಕ್ಕೆ ಹೆಗಲು ಕೊಟ್ಟು ಬಹು ದೂರದವರೆಗೆ ನಡೆದರು. ಸುರೇಂದ್ರ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ದುಷ್ಕರ್ಮಿಗಳು ಸುರೇಂದ್ರ ಸಿಂಗ್ ಅವರ ಮೇಲೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಆದರೆ ಹತ್ಯೆ ಮಾಡಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುರೇಂದ್ರ ಸಿಂಗ್ ಅಮೇಥಿಯ ಬರೌಲಿಯಾ ಗ್ರಾಮದವರಾಗಿದ್ದು, ಈ ಗ್ರಾಮವನ್ನು 2015 ರಲ್ಲಿ ಮನೋಹರ್ ಪರಿಕ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿ ದತ್ತು ಪಡೆದಿದ್ದರು. ಆದರೆ ಬಿಜೆಪಿ ಪರ ಪ್ರಚಾರ ನಡೆಸಲು ಸುರೇಂದ್ರ ಅವರು ಹಳ್ಳಿಯನ್ನು ಬಿಟ್ಟು ಬೇರೆಡೆ ನೆಲೆಸಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಪರ ನಿರಂತರವಾಗಿ ಪ್ರಚಾರ ನಡೆಸಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಪ್ರಚಾರ ಸಭೆಯ ವೇಳೆ ಸ್ಮೃತಿ ಇರಾನಿ ಅವರು ಸುರೇಂದ್ರ ಅವರ ಕಾರ್ಯವನ್ನು ಹಾಡಿಹೊಗಳಿದ್ದರು.

Smriti Irani lends shoulder to mortal remains of close aide who was shot dead in Amethi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ