ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿ ಗೆದರಿದ್ದು, ಒಂದೆಡೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ಯತ್ನಿಸುತ್ತಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ಅತೃಪ್ತ ಶಾಸಕರು ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಚಿಕ್ಕಬಳ್ಳಪುರ ಶಾಸಕ ಡಾ. ಸುಧಾಕರ್ ಅವರು ಇಂದು ಬಿಜೆಪಿ ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಒಂದೆಡೆ ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆದು ಬಿಜೆಪಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಪ್ರಯತ್ನ ನಡೆಸಿರುವಂತೆ, ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಡಾ. ಸುಧಾಕರ್ ಎಸ್.ಎಂ. ಕೃಷ್ಣ ಅವರ ಮನೆಗೆ ತೆರಳಿ ಅವರನ್ನು ಭೇಟಿಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಷ್ ಅವರು ಎಸ್.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದು ಹಲವು ಊಹಾಪೋಹಗಳಿಗೆ ಕಾರಣವಾಯಿತು.
ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ಮತ್ತು ಡಾ. ಸುಧಾಕರ್ ಅವರು ಎಸ್.ಎಂ. ಕೃಷ್ಣ ಅವರ ಅಭಿಮಾನಿಗಳು. ಹಾಗಾಗಿ ಅವರನ್ನು ಭೇಟಿಯಾಗಲು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ನಾವು ಬಂದಿದ್ದು ಕಾಕತಾಳೀಯ. ಇದರಲ್ಲಿ ಯಾವುದೇ ತಂತ್ರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.