ಇಂಗ್ಲೆಂಡ್ನಲ್ಲಿ ನಡೆಯೋದು ಆಲ್ರೌಂಡರ್ಗಳ ವಿಶ್ವಕಪ್..! 10 ತಂಡಗಳು, 46 ಆಲ್ರೌಂಡರ್ಗಳು, 1 ವಿಶ್ವಕಪ್..!

ವಿಶ್ವಕಪ್ ಬ್ಯಾಟಲ್ಗೆ ಕೌಟ್ಡೌನ್ ಶುರುವಾಗಿದೆ. ಇಂಗ್ಲೆಂಡ್ನ ಪಿಚ್ಗಳು ಬ್ಯಾಟಿಂಗ್ ಸ್ನೇಹಿ ಪಿಚ್ಗಳಾಗಿದ್ದು, ಆಲ್ರೌಂಡರ್ಗಳೇ ಆಯಾ ತಂಡಗಳ ಪ್ರಮುಖ ಅಸ್ತ್ರವಾಗಿರಲಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಲ್ರೌಂಡರ್ಗಳ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಹೀಗಾಗಿ ವಿಶ್ವಕಪ್ ಆಲ್ರೌಂಡರ್ಗಳ ಪಾರುಪತ್ಯಕ್ಕೆ ಸಾಕ್ಷಿಯಾಗಲಿದೆ.

ಟೀಮ್ ಇಂಡಿಯಾಕ್ಕೆ ನಾಲ್ವರು ಆಲ್ರೌಂಡರ್ಗಳ ಬಲ..!
ಕಪಿಲ್ ದೇವ್ ನಿವೃತ್ತಿ ನಂತರ ಭಾರತಕ್ಕೆ ಕಾಡುತ್ತಿದ್ದದ್ದು ವೇಗದ ಬೌಲಿಂಗ್ ಆಲ್ರೌಂಡರ್. ಆದರೆ, ಈ ಬಾರಿ ಹಾರ್ದಿಕ್ ಪಾಂಡ್ಯರಂಥ ಅಗ್ರ ಆಲ್ರೌಂಡರ್ನೊಂದಿಗೆ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ತೆರಳಿದೆ. ರವೀಂದ್ರ ಜಡೇಜಾ ಹಾಗೂ ವಿಜಯ್ ಶಂಕರ್ ತಂಡದಲ್ಲಿದ್ದರೂ, ಆಲ್ರೌಂಡರ್ ಸ್ಥಾನಕ್ಕೆ ಮೊದಲ ಆಯ್ಕೆ ಹಾರ್ದಿಕ್ ಪಾಂಡ್ಯ ಆಗಿರುತ್ತಾರೆ. ಇನ್ನೂ ಕೇದಾರ್ ಜಾಧವ್ ಬ್ಯಾಟಿಂಗ್ ಆಲ್ರೌಂಡರ್ ಆಗಿದ್ದಾರೆ. ವಿಶ್ವಕಪ್ನಲ್ಲಿ ಈ ಆಟಗಾರರು ಕಮಾಲ್ ಮಾಡಿದ್ರೆ. ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ…

ಇಂಗ್ಲೆಂಡ್ ತಂಡದಲ್ಲಿದ್ದಾರೆ ಅರ್ಧಕ್ಕೂ ಹೆಚ್ಚು ಆಲ್ರೌಂಡರ್ಸ್..!
ಆತಿಥೇಯ ಇಂಗ್ಲೆಂಡ್ ಈ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಇದಕ್ಕೆ ಕಾರಣ ವಿಶ್ವಕಪ್ ತಂಡದಲ್ಲಿ ಅರ್ಧಕ್ಕೂ ಅಧಿಕ ಆಲ್ರೌಂಡರ್ಗಳಿಗೆ ಮಣೆ ಹಾಕಿರುವುದು. ಇಂಗ್ಲೆಂಡ್ ತಂಡದಲ್ಲಿ 6 ಆಲ್ರೌಂಡರ್ಗಳಿಗೆ ಸ್ಥಾನ ನೀಡಲಾಗಿದೆ. ಇದರಲ್ಲಿ ಬೆನ್ ಸ್ಟೋಕ್ಸ್ ಹಾಗೂ ಮೊಯಿನ್ ಅಲಿ, ಜೋರ್ಫಾ ಆರ್ಚರ್ ತಂಡದ ಪ್ರಮುಖ ಆಲ್ರೌಂಡರ್ಗಳಾಗಿದ್ದಾರೆ. ವೇಗದ ಬೌಲಿಂಗ್ ಹಾಗೂ ಸ್ಪಿನ್ ಬೌಲಿಂಗ್ನಲ್ಲಿ ಇವರು ವಿಫಲರಾದಲ್ಲಿ, ಅದಕ್ಕೆ ಬದಲಿಯಾಗಿ ಕ್ರಿಸ್ ವೋಕ್ಸ್, ಟಾಮ್ ಕರನ್, ಲೈಮ್ ಡೇವ್ಸನ್ ಹನ್ನೊದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.

ಇಂಗ್ಲೆಂಡ್ ಬಿಟ್ಟರೆ, ಅಗ್ರ ಆಲ್ರೌಂಡರ್ಗಳನ್ನು ಹೊಂದಿರುವ ತಂಡ ದಕ್ಷಿಣ ಆಫ್ರಿಕಾ. ಅನುಭವಿ ಜೆಪಿ ಡುಮಿನಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿದ್ದರೆ, ಕ್ರಿಸ್ ಮೊರಿಸ್ ವೇಗದ ಬೌಲಿಂಗ್ ಆಲ್ರೌಂಡರ್ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ಪರ ಮಿಂಚಿರುವ ಆಂಡಿಲ್ ಪೆಹ್ಲುಕ್ವಾಯೋ ಹಾಗೂ ಡ್ವೈನ್ ಪ್ರಿಟೋರಿಯಸ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡರ್ ವಿಭಾಗದಲ್ಲಿ ಉತ್ತಮ ಸಂಯೋಜನೆ ಹೊಂದಿರುವ ದಕ್ಷಿಣ ಆಫ್ರಿಕಾಕ್ಕೆ ಈ ಬಾರಿ ಅದೃಷ್ಟ ಮಾತ್ರವೇ ಕೈಹಿಡಿಯಬೇಕಿದೆ.

ಕ್ರಿಕೆಟ್ ಶಿಶುಗಳ ತಂಡಗಳಲ್ಲಿದ್ದಾರೆ ಸ್ಟಾರ್ ಆಲ್ರೌಂಡರ್ಸ್..!
ಏಕದಿನದ ನಂ.1 ಆಲ್ರೌಂಡರ್ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ನಂ.2 ಅಫ್ಘಾನಿಸ್ತಾನದ ರಶೀದ್ ಖಾನ್, ಶ್ರೀಲಂಕಾದ ವೇಗದ ಬೌಲಿಂಗ್ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಮೇಲೆ ಆಯಾ ತಂಡಗಳು ಹೆಚ್ಚಿನ ನಿರೀಕ್ಷೆ ಹೊಂದಿವೆ. ಅಫ್ಘಾನಿಸ್ತಾನ ತಂಡದಲ್ಲಿ ರಶೀದ್ ಮಾತ್ರವಲ್ಲದೆ ಮೊಹಮದ್ ನಬಿ ಕೂಡ ಮಿಂಚುತ್ತಿದ್ದಾರೆ. ಜೇಸನ್ ಹೋಲ್ಡರ್, ಕಾಲೋಸ್ ಬ್ರಾಥ್ವೇಟ್, ಆಂಡ್ರೆ ರಸೆಲ್ ಪ್ರಮುಖ ಅಸ್ತ್ರಗಳಾಗಿದ್ದಾರೆ.. ಪಾಕಿಸ್ತಾನ ತಂಡಕ್ಕೂ ಸೂಕ್ತ ವೇಗದ ಬೌಲಿಂಗ್ ಆಲ್ರೌಂಡರ್ ಕೊರತೆ ಇದೆ. ಶೋಯೆಬ್ ಮಲಿಕ್ ಹಾಗೂ ಶಾದಾಬ್ ಖಾನ್ ತಂಡದಲ್ಲಿದ್ದರೂ, ಮಲಿಕ್ ಮೇಲೆ ಹೆಚ್ಚಿನ ಭಾರವಿದೆ. ವಿಶ್ವ ನಂ.6 ಆಲ್ರೌಂಡರ್ ಇಮಾದ್ ವಾಸಿಂ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ.

ಮೂವರು ಆಲ್ರೌಂಡರ್ಗಳು ಆಸಿಸ್ ತಂಡದಲ್ಲಿದ್ದರೂ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್, ವೇಗದ ಬೌಲಿಂಗ್ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಮೇಲೆ ಆಸೀಸ್ ಭಾರವಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಇವರ ನಿರ್ವಹಣೆಯ ಮೇಲೆ ಆಸೀಸ್ ತಂಡದ ಯಶಸ್ಸು ನಿರ್ಧಾರವಾಗಲಿದೆ. ಇನ್ನು ಒಂದು ಕಾಲದಲ್ಲಿ ವಿಶ್ವದ ಅಗ್ರ ಆಲ್ರೌಂಡರ್ಗಳನ್ನು ಹೊಂದಿದ್ದ ನ್ಯೂಜಿಲೆಂಡ್, ಈ ಬಾರಿ ಗ್ರಾಂಡ್ ಹೋಮ್, ಜಿಮ್ಮಿ ನಿಶಾಮ್, ಸ್ಯಾಂಟ್ನರ್ ಸ್ಥಾನ ನೀಡಿದ್ದು, ಬ್ಯಾಟಿಂಗ್ ಸ್ನೇಹಿ ಇಂಗ್ಲೆಂಡ್ ಪಿಚ್ಗಳಲ್ಲಿ ಎಷ್ಟರ ಮಟ್ಟಿಗೆ ಪ್ರದರ್ಶನ ನೀಡ್ತಾರೆ ಅನ್ನೋದನ್ನ ಕಾದುನೋಡಬೇಕು..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ