ಬೆಂಗಳೂರು, ಮೇ 25- ಪುರಸಭೆ, ನಗರಸಭೆ,ಪಟ್ಟಣ ಪಂಚಾಯ್ತಿ ಸೇರಿದಂತೆ ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಮತದಾನ ನಡೆಯಲಿದ್ದು, ಚುನಾವಣಾ ಕಣದಲ್ಲಿ 4360 ಅಭ್ಯರ್ಥಿಗಳಿದ್ದಾರೆ.
61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್ಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ 30 ವಾರ್ಡ್ಗಳಿಗೆ ಅವಿರೋಧ ಆಯ್ಕೆಯಾಗಿದೆ.
ಉಳಿದ 1296 ವಾರ್ಡ್ಗಳಿಗೆ ಮತದಾನ ನಡೆಯಬೇಕಿದ್ದು, ಕಾಂಗ್ರೆಸ್-1224, ಬಿಜೆಪಿ-1125, ಜೆಡಿಎಸ್-780, ಸಿಪಿಐಎಂ-25, ಬಿಎಸ್ಪಿ 103 ಪಕ್ಷೇತರರು 1056 ಅಭ್ಯರ್ಥಿಗಳು ಸೇರಿದಂತೆ ಒಟ್ಟು 4360 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಬಿಬಿಎಂಪಿ ಎರಡು ವಾರ್ಡ್, ಹೆಬ್ಬಗೋಡಿ ಪುರಸಭೆಯ ಒಂದು ವಾರ್ಡ್, ತುಮಕೂರು ಮಹಾನಗರ ಪಾಲಿಕೆಯ ಒಂದು ವಾರ್ಡ್, ಬೆಳಗಾವಿ ಜಿಲ್ಲೆಯ ಸದಲಗ ಮುಗಳಖೋಡ ಪುರಸಭೆಗಳ ತಲಾ ಒಂದು ವಾರ್ಡ್ಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 32 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಮೇ 20ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿತ್ತು. ಅಂತಿಮವಾಗಿ ಕಾಂಗ್ರೆಸ್ನ 15, ಬಿಜೆಪಿ, ಜೆಡಿಎಸ್ನ ತಲಾ ಒಂದೊಂದು ಹಾಗೂ 13 ಪಕ್ಷೇತರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.