ಬೆಂಗಳೂರು, ಮೇ 23- ನಗರದಲ್ಲಿ ಉಲ್ಭಣಿಸುತ್ತಿರುವ ಡೇಂಘಿ ಹತೋಟಿಗೆ ಎಲ್ಲ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇಂದಿಲ್ಲಿ ತಿಳಿಸಿದರು.
ನಗರದಲ್ಲಿ ಇತ್ತೀಚೆಗೆ ಸರಿಯಾಗಿ ಮಳೆಯಾಗದೆ ಇರುವುದು, ಅತಿಯಾದ ಬಿಸಿಲಿನಿಂದಾಗಿ ಡೇಂಘಿ ರೋಗ ಉಲ್ಬಣಿಸುತ್ತಿದೆ. ಪಾಲಿಕೆಯ ಎಲ್ಲ ಆರೋಗ್ಯಾಧಿಕಾರಿಗಳಿಗೆ ಎಚ್ಚರ ವಹಿಸುವಂತೆ ತಿಳಿಸಿದ್ದೇನೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
ರೋಗ ತಡೆಗಟ್ಟುವ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪಾಲಿಕೆಯ ಸಂಪರ್ಕ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ, ರೋಗಗಳ ಕುರಿತು ಅರಿವು ಮೂಡಿಸಲಿದ್ದಾರೆ ಎಂದು ಹೇಳಿದರು.
ಇಡಿಪಸ್ ಸೊಳ್ಳೆಯಿಂದರೋಗ ಬರುತ್ತದೆ. ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ. ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಕಿಟಕಿ ಬಾಗಿಲಿಗೆ ಸೊಳ್ಳೆ ಪರದೆ ಬಳಸಿ, ನೀರು ಶೇಖರಣಾ ಸಾಮಾಗ್ರಿಗಳು ಸ್ವಚ್ಚವಾಗಿರಬೇಕು, ತೆಂಗಿನ ಸಿಪ್ಪೆ ಸೇರಿದಂತೆ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಣ್ಣ ಜ್ವರ ಬಂದರೂ ಪಾಲಿಕೆ ಆಸ್ಪತ್ರೆಗಳಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆಯುಕ್ತರು ಜನರಲ್ಲಿ ಮನವಿ ಮಾಡಿದರು. ಇತ್ತೀಚೆಗೆ ನೂರಾರು ಮಂದಿಯಲ್ಲಿ ಡೇಂಘಿ ಕಂಡುಬಂದಿರುವುದರಿಂದ ಪಾಲಿಕೆ ಆಸ್ಪತೆಗಳಲ್ಲಿ ಔಷಧಿ ಸಂಗ್ರಹಿಸಿಕೊಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
ರಕ್ತ ತಪಾಸಣೆ ಮಾಡಿ ತಕ್ಷಣ ವರದಿ ಕೂಡ ನೀಡಲಾಗುತ್ತದೆ. ಆದ್ದರಿಂದ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ಹಣ ನೀಡುವ ಬದಲು ಪಾಲಿಕೆ ಆಸ್ಪತ್ರೆಗೆ ಹೋಗಬೇಕೆಂದು ಮಂಜುನಾಥ್ ಪ್ರಸಾದ್ ಸಲಹೆ ನೀಡಿದರು.