ನವದೆಹಲಿ: ಲೋಕಸಭೆ ಚುನಾವಣೆ 2019ರ ಪ್ರಕ್ರಿಯೆಗೆ ತೆರೆಬಿದ್ದು ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿ, 16ನೇ ಲೋಕಸಭೆಯನ್ನು ಬರ್ಖಾಸ್ತುಗೊಳಿಸಿ, 17ನೇ ಲೋಕಸಭೆ ಸ್ಥಾಪನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಲೋಕಸಭೆಯನ್ನು ಬರ್ಖಾಸ್ತುಗೊಳಿಸುವ ನಿರ್ಣಯ ಅಂಗೀಕರಿಸಲಾಯಿತು.
ಬಳಿಕ ಸಚಿವ ಸಂಪುಟದ ಎಲ್ಲ ಸದಸ್ಯರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಬಳಿಕ ರಾಷ್ಟ್ರಪತಿ ಭವನಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ತಮ್ಮ ಹಾಗೂ ತಮ್ಮ ಸಚಿವ ಸಂಪುಟ ಸದಸ್ಯರೆಲ್ಲರ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ರಾಜೀನಾಮೆ ಪತ್ರ ಅಂಗೀಕರಿಸಿದ ರಾಷ್ಟ್ರಪತಿ, ಹೊಸ ಪ್ರಧಾನಿ ನೇಮಕವಾಗುವವರೆಗೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವಂತೆ ನರೇಂದ್ರ ಮೋದಿ ಅವರಿಗೆ ಸೂಚಿಸಿದರು.
16ನೇ ಲೋಕಸಭೆ ಬರ್ಖಾಸ್ತುಗೊಂಡಿರುವ ಹಿನ್ನೆಲೆಯಲ್ಲಿ ಜೂನ್ 3ಕ್ಕೂ ಮೊದಲು 17ನೇ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಇದೀಗ ಲೋಕಸಭೆ ಚುನಾವಣೆಗಳು ಮುಕ್ತಾಯವಾಗಿದ್ದು, ಅದರ ಫಲಿತಾಂಶದ ವಿವರವನ್ನು ಕೇಂದ್ರ ಚುನಾವಣಾ ಆಯೋಗದ ಮೂವರು ಆಯುಕ್ತರು ರಾಷ್ಟ್ರಪತಿ ಅವರಿಗೆ ಸಲ್ಲಿಸಲಿದ್ದಾರೆ.
ಆನಂತರದಲ್ಲಿ 17ನೇ ಲೋಕಸಭೆ ಸ್ಥಾಪನೆ ಪ್ರಕ್ರಿಯೆ ಆರಂಭವಾಗಲಿದೆ.
16ನೆ ಲೋಕಸಭೆ ಮುಕ್ತಾಯವಾದ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸೂರ್ಯ ತನ್ನ ನಿಯಮಾನುಸಾರ ಮುಳುಗುತ್ತಾನೆ… ಆದರೆ, ನಾವು ಮಾಡಿದ ಕೆಲಸಗಳು ಉಜ್ವಲವಾಗಿ ಪ್ರಜ್ವಲಿಸುತ್ತಾ ಕೋಟ್ಯಂತರ ಮನೆ, ಮನಗಳನ್ನು ಬೆಳಗುತ್ತವೆ… ಹೊಸ ಬೆಳಗು ಹೊಸ್ತಿಲಲ್ಲಿದ್ದು… ಹೊಸ ಕಾಲಾವಧಿ ನಮಗಾಗಿ ಎದುರು ನೋಡುತ್ತಿದೆ…’ ಎಂದು ಕವಿತೆಯ ಮೂಲಕ ರಾಷ್ಟ್ರಪತಿ ಅವರಗೆ ಪ್ರತಿಕ್ರಿಯಿಸಿದ್ದಾರೆ.