ಕಲಬುರಗಿ: ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ರಾಹುಲ್ ಗಾಂಧಿ ರಾಜೀನಾಮೆ ಕೇಳುವುದು ಸರಿಯಲ್ಲ. ರಾಹುಲ್ ದುಡಿದಷ್ಟು ಬೇರೆ ನಾಯಕರು ದುಡಿದಿಲ್ಲ. ಪಕ್ಷವನ್ನು ಒಗ್ಗೂಡಿಸಿ ಒಟ್ಟಾಗಿ ಕರೆದೊಯ್ಯಲು ರಾಹುಲ್ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ನಿರೀಕ್ಷೆಯಂತೆ ಹಲವು ಕ್ಷೇತ್ರಗಳಲ್ಲಿ ಮತಗಳು ಬಂದಿಲ್ಲ. ಆದರೆ ಪಕ್ಷವನ್ನು ಮುನ್ನಡೆಸಲು ರಾಹುಲ್ ಮಾತ್ರ ಸಮರ್ಥ. ಹಾಗಾಗಿ ಅವರು ರಾಜೀನಾಮೆ ನೀಡುವುದು ಸೂಕ್ತವಲ್ಲ ಎಂದರು.
ನಾಳೆ 11 ಗಂಟೆಗೆ ಆಲ್ ಇಂಡಿಯಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಿದೆ. ನಾಳೆಯ ಸಭೆಯಲ್ಲಿ ನಾನು ಭಾಗಿಯಾಗಲಿದ್ದೇನೆ. ನಾಳೆ ಎಲ್ಲ ರಾಜ್ಯದ ಉಸ್ತುವಾರಿ ಸೆಕ್ರೆಟರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಬರುತ್ತಾರೆ. ಫಲಿತಾಂಶದ ಬಗ್ಗೆ ಕೆಲವು ವಿಚಾರಗಳು ಚರ್ಚೆ ಆಗುತ್ತವೆ. ಅಧ್ಯಕ್ಷರ ನಿರ್ಣಯದ ಮೇಲೆ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದರು.