ಹಾಸನ: ಮೈತ್ರಿ ಅಭ್ಯರ್ಥಿಯಾಗಿ ಹಾಸನದಿಂದ ಸ್ಪರ್ಧಿಸಿ ಬಿಜೆಪಿಯ ಎ.ಮಂಜು ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದ ಪ್ರಜ್ವಲ್ ರೇವಣ್ಣ ಇದೀಗ ಅಚ್ಚರಿಯ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕೀಯದ ಸುದ್ದಿ ಕೇಂದ್ರದಲ್ಲಿದ್ದಾರೆ. “ಕಾರ್ಯಕರ್ತರ ಹಾಗೂ ಹಿರಿಯ ನಾಯಕರ ಆಶೀರ್ವಾದ ಪಡೆದು ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂಬ ಅವರ ಹೇಳಿಕೆ ಪ್ರಸ್ತುತ ಭಾರಿ ಚರ್ಚೆಗೆ ಕಾರಣವಾಗಿದೆ.
ರಾಜ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೀನಾಯವಾಗಿ ಸೋತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹಾಗೂ ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಗೆದ್ದಿದ್ದು ಬಿಟ್ಟರೆ ಉಳಿದ ಎಲ್ಲಾ ಕಡೆಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಹೇಳ ಹೆಸರಿಲ್ಲದಂತೆ ಹೀನಾಯವಾಗಿ ಸೋಲನುಭವಿಸಿದ್ದಾರೆ. ಪರಿಣಾಮ 22 ಸ್ಥಾನಗಳ ನಿರೀಕ್ಷೆಯಲ್ಲಿದ್ದ ಬಿಜೆಪಿ ಪಾಲಿಗೆ ಅನಿರೀಕ್ಷಿತವೆಂಬಂತೆ 25 ಸ್ಥಾನ ಒಲಿದುಬಂದಿದೆ.
ತಾತ ಮೊಮ್ಮಕ್ಕಳ ಚುನಾವಣೆ ಎಂದೇ ವಿರೋಧ ಪಕ್ಷಗಳಿಂದ ಹಂಗಿಸಲಾಗಿದ್ದ ಮಂಡ್ಯ ಹಾಗೂ ತುಮಕೂರಿನಲ್ಲೂ ಜೆಡಿಎಸ್ಗೆ ಸೋಲಾಗಿದೆ. ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸೋತಿದ್ದರೆ, ಮಾಜಿ ಪ್ರಧಾನಿ ದೇವೇಗೌಡ ಕೂಡ ತುಮಕೂರಿನಲ್ಲಿ ಹೀನಾಯವಾಗಿ ಸೋಲು ಕಂಡಿದ್ಧಾರೆ. ಪರಿಣಾಮ ಈ ಫಲಿತಾಂಶ ಪ್ರಜ್ವಲ್ಗೆ ನೋವು ನೀಡಿದೆಯಂತೆ. ಪರಿಣಾಮ “ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಮತ ನೀಡಿದ ಹಾಸನ ಜಿಲ್ಲೆಯ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ಗೆದ್ದು ಸಂತೋಷವಾಗಿದ್ದರೂ ಸೋತಂತ ಅನುಭವವಾಗುತ್ತಿದೆ. ಹಾಗಾಗಿ ಎಲ್ಲರ ಆಶೀರ್ವಾದ ಪಡೆದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ,” ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ನೀಡಿದ್ದಾರೆ.
ದೇವೇಗೌಡರಿಗೆ ತುಮಕೂರಿನಲ್ಲಿ ಸೋಲಾದ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಜ್ವಲ್ “ದೇವೇಗೌಡರಿಗೆ ತುಮಕೂರಿನಲ್ಲಿ ಸೋಲಾಗಿದೆ. ಆದರೆ ಅವರು ಅಲ್ಲಿ ಭಾರೀ ಹೋರಾಟ ನಡೆಸಿದ್ದರು. ದೇವೇಗೌಡರು ರಾಜಕೀಯದಿಂದ ಬಂದವರಲ್ಲಾ, ಹೋರಾಟದಿಂದಲೇ ಬಂದವರು. ಆಕಸ್ಮಿಕವಾಗಿ ನಾವು ಸೋಲು ಕಂಡಿದ್ದೇವೆ, ಯಾರೂ ಬೇಸರ ಮಾಡಿಕೊಳ್ಳಬೇಡಿ” ಎಂದು ಅವರು ಭಾವುಕರಾದರು.
ಇಂದು ಮದ್ಯಾಹ್ನ ಒಂದು ಗಂಟೆಗೆ ದೇವೇಗೌಡರ ಬಳಿಗೆ ಹೋಗಿ ಮನ ಒಲಿಸುವೆ ಎಂದಿರುವ ಪ್ರಜ್ವಲ್, “ದೇವೇಗೌಡರು ನನಗೆ ಈ ಕ್ಷೇತ್ರ ಬಿಟ್ಟುಕೊಟ್ಟಿದ್ದರು.
ಆದರೆ, ಅವರು ಮತ್ತೆ ಹಾಸನಕ್ಕೆ ಬರಬೇಕು. ಹಾಸನದ ಜನರು ನನಗೆ ಮತ ಹಾಕಿದ್ದಾರೆ. ಅದನ್ನು ನಾನು ಸಂಪೂರ್ಣವಾಗಿ ಗೌರವಿಸುವೆ. ಯಾರೊಬ್ಬರಿಗೂ ಅವಮಾನ ಮಾಡುವ ಉದ್ದೇಶ ನನ್ನದಲ್ಲ. ಹಾಸನ ಜನರ ಪ್ರೀತಿ ವಿಶ್ವಾಸಕ್ಕೆ ನಾನು ಚಿರರುಣಿ,” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಭೂತಪೂರ್ವ ಗೆಲುವಿಗೆ ಶುಭಾಶಯ ತಿಳಿಸಿದ ಪ್ರಜ್ವಲ್, “ಇಂದಿನ ಚುನಾವಣೆ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇದೆ.
ಸೋಲಿನಿಂದ ಮತ್ತೆ ಗೆಲ್ಲುತ್ತೇವೆ. ಮುಂದಿನ ದಿನಗಳಲ್ಲಿ ನಾವು ಜನರ ಮನಸ್ಸು ಗೆದ್ದೇ ಗೆಲ್ಲುತ್ತೇವೆ. ಮೋದಿಗೆ ಜನ್ರು ಬೆಂಬಲ ನೀಡಿದ್ದಾರೆ. ಅವರಿಗೆ ನಾನು ಶುಭಾಶಯ ಕೋರುತ್ತೇನೆ,” ಎಂದಿದ್ದಾರೆ.
ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ. ಮಂಜು ವಿರುದ್ಧ ಪ್ರಜ್ವಲ್ 1.42 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಕ್ಷೇತ್ರವನ್ನು ಕಳೆದ ಮೂರು ದಶಕಗಳಿಂದ ಎಚ್ಡಿ ದೇವೇಗೌಡ ಪ್ರತಿನಿಧಿಸಿದ್ದರು.