ಬೆಂಗಳೂರು,ಮೇ 24-ಕೋಲಾರ ಸಂಸದರಾಗಿ ಆಯ್ಕೆಯಾಗಿರುವ ಕಾಡುಗೋಡಿ ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಅವರು ತಮ್ಮ ಕಾರ್ಪೊರೇಟರ್ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ.
ಬಿಬಿಎಂಪಿ ಸದಸ್ಯರಾದವರು ಶಾಸಕರಾಗಿ ಆಯ್ಕೆಯಾದರೆ ಅಂಥವರು ಕಾರ್ಪೊರೇಟರ್ ಮತ್ತು ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.
ಆದರೆ ಸಂಸದರಾಗಿ ಆಯ್ಕೆಯಾದವರು ಯಾವುದೇ ಕಾರಣಕ್ಕೂ ಬಿಬಿಎಂಪಿ ಸದಸ್ಯರಾಗಿ ಮುಂದುವರೆಯಲು ಕಾನೂನಿನಲ್ಲಿ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಮುನಿಸ್ವಾಮಿ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲೇಬೇಕಾಗಿದೆ.
ಈ ಹಿಂದೆ ಕೆ.ಚಂದ್ರಶೇಖರ್, ನರೇಂದ್ರಬಾಬು, ಮುನಿರತ್ನ, ಭೆರತಿ ಬಸವರಾಜ್ ಅವರು ಬಿಬಿಎಂಪಿ ಸದಸ್ಯರಾಗಿದ್ದುಕೊಂಡೇ ಶಾಸಕರಾಗಿ ಆರಿಸಿ ಬಂದಿದ್ದರು.
ಇತ್ತೀಚೆಗೆ ಬಸವನಪುರ ವಾರ್ಡ್ ಬಿಜೆಪಿ ಸದಸ್ಯರಾಗಿದ್ದ ಕೆ.ಪೂರ್ಣಿಮಾ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಆದರೆ ಇದುವರೆಗೂ ಯಾವೊಬ್ಬ ಬಿಬಿಎಂಪಿ ಸದಸ್ಯರು ಸಂಸದರಾಗಿ ಆಯ್ಕೆಯಾದ ಇತಿಹಾಸವೇ ಇಲ್ಲ. ಇದೀಗ ಕಾಡುಗೋಡಿ ಸದಸ್ಯ ಮುನಿಸ್ವಾಮಿ ಅವರು ಕೋಲಾರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹಿರಿಯ ಕಾಂಗ್ರೆಸಿಗ ಕೆ.ಎಚ್.ಮುನಿಯಪ್ಪ ಅವರನ್ನು ಪರಾಭವಗೊಳಿಸಿ ದಾಖಲೆ ನಿರ್ಮಿಸಿದ್ದಾರೆ.
ಹೀಗಾಗಿಯೇ ಶಾಸಕರ ರೀತಿಯಲ್ಲೇ ಸಂಸದರು ಕೂಡ ಬಿಬಿಎಂಪಿ ಸದಸ್ಯರಾಗಿ ಮುಂದುವರೆಯಲು ಅವಕಾಶವಿದೆಯೋ ಇಲ್ಲವೋ ಎಂಬ ಅನುಮಾನವಿತ್ತು. ಆದರೆ ಕಾನೂನಿನಲ್ಲಿ ಸಂಸದರು ಬಿಬಿಎಂಪಿ ಸದಸ್ಯರಾಗಿ ಮುಂದುವರೆಯಲು ಅವಕಾಶವಿಲ್ಲ ಎಂಬುದು ಸ್ಪಷ್ಟವಾಗಿದೆ.