ಬೆಂಗಳೂರು,ಮೇ 24- ಜನರ ಒಳಿತಿಗಾಗಿ ಬದ್ದತೆಯಿಂದ ಶ್ರಮಿಸುವ ಹಾಗೂ ಪ್ರಗತಿ ಉತ್ತೇಜಿಸುವ ಸ್ಥಿರ ಸರ್ಕಾರ ಉದ್ಯಮ ನಿರೀಕ್ಷೆಗೆ ಹೆಚ್ಚಿನ ಆದ್ಯತೆ ದೊರಕಿಸಿಕೊಡುವಂತಾಗಲಿ ಎಂದು ಕಾಸಿಯಾ ಅಧ್ಯಕ್ಷರು ಬಸವರಾಜ್.ಎಸ್ ಜವಳಿ ಹೇಳಿದರು.
ಭಾರತದ 17ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮೋದಿ ನೇತೃತ್ವದಲ್ಲಿ ಅಧಿಕಾರ ಸ್ವೀಕರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಸಮಸ್ತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಕಾಸಿಯಾ ಪರವಾಗಿ ತಿಳಿಯಬಯಸುತ್ತೇವೆ ಎಂದರು.
ಮುಂದಿನ 5 ವರ್ಷ ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಕಲ್ಯಾಣದತ್ತಲೇ ಚಿಂತಿಸುವ ಅಗತ್ಯವಿದೆ.ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ, ಬೆಳೆಯುತ್ತಿರುವ ನಿರುದ್ಯೋಗ, ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ, ಕೈಗಾರಿಕೆಗಳ ಅವನತಿ ಹಾಗೂ ಇತರ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಕಳೆದ ಬಾರಿ ನೀಡಿದ್ದ ಹಲವಾರು ಭರವಸೆಗಳು ಈಡೇರಿಲ್ಲ ಅವುಗಳನ್ನು ಈಡೇರಿಸಬೇಕಾಗಿದೆ. ಬಂಡವಾಳ ಹೂಡಿಕೆ ಹೆಚ್ಚಿಸಿ ಆರ್ಥಿಕ ಬೆಳವಣಿಗೆ ಉತ್ತೇಜಿಸಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ ಎಂಬುದನ್ನು ಕೈಗಾರಿಕೋದ್ಯಮಿಗಳು ನಿರೀಕ್ಷಿಸುತ್ತಿದ್ದಾರೆ. ಹೊಸ ಸರ್ಕಾರವು ದೇಶಿ ಆರ್ಥಿಕ ವೃದ್ದಿ ದರವು (ಒಟ್ಟು ಆಂತರಿಕ ಉತ್ಪನ್ನ ಜಿಡಿಪಿ) ಹೆಚ್ಚಳಕ್ಕೆ ಕಾರಣವಾಗುವ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಗತ್ತಿನ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಭಾರತವು ಸಮಗ್ರವಾಗಿ ಅಭಿವೃದ್ದಿಗೊಳ್ಳಬೇಕಾದರೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ. ಸರ್ಕಾರದ ಕಾರ್ಯಚಟುವಟಿಕೆಗಳಲ್ಲಿ ಕಾಸಿಯಾ ಸಕ್ರಿಯಾವಾಗಿ ಭಾಗಿಯಾಗುವ ಮೂಲಕ ಭಾರತವನ್ನು ಇನ್ನಷ್ಟು ಅಭಿವೃದ್ದಿಯತ್ತ ಕೊಂಡೊಯ್ಯುಬೇಕಾಗಿದೆ ಎಂದರು.
ನಮ್ಮ ಮುಂದಿನ ಜನಾಂಗಕ್ಕಾಗಿ ಭವ್ಯ ಭಾರತ ರೂಪಿಸುವಲ್ಲಿ ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಪಾತ್ರವು ಇರಲಿ ಎಂದು ಆಶಿಸುತ್ತಾ ಮೋದಿಜಿ ರವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ ಅವರ ಯಶಸ್ವಿಗೆ ಶುಭ ಹಾರೈಕೆಗಳನ್ನು ಕಾಸಿಯ ಕೋರಬಯಸುತ್ತದೆ ಬಸವರಾಜ್.ಎಸ್ ಜವಳಿ ಹೇಳಿದರು.