ಎನ್‌ಡಿಎ 350, ಯುಪಿಎ 84, ಇತರ 108 ಮುನ್ನಡೆ

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದು, 542 ಕ್ಷೇತ್ರಗಳಲ್ಲಿ ಇತ್ತೀಚಿನ ಮಾಹಿತಿ ಪ್ರಕಾರ ಪ್ರಕಾರ ಎನ್‌ಡಿಎ 350, ಯುಪಿಎ 84 ಹಾಗೂ ಇತರರು 108 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕರ್ನಾಟಕದಲ್ಲೂ ಬಿಜೆಪಿ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಏಕಾಂಗಿಯಾಗಿ ಬಿಜೆಪಿ ಮ್ಯಾಜಿಕ್ ಸಂಖ್ಯೆ 272ನ್ನೂ ದಾಟಿದ್ದು, 292 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 50 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಮತ್ತು ತೆಲಂಗಾಣ ಸಿಎಂ ಪುತ್ರಿ ಕವಿತಾ- ಇಬ್ಬರೂ ಸೋಲಿನತ್ತ. ಬಿಹಾರದ ಪಟ್ನಾಸಾಹಿಬ್ ಕ್ಷೇತ್ರದಲ್ಲಿ ಬಿಜೆಪಿಯ ರವಿಶಂಕರ್ ಪ್ರಸಾದ್ ಕಾಂಗ್ರೆಸ್‌ನ ಶತ್ರುಘ್ನ ಸಿನ್ಹಾಗಿಂತ 1,33,959 ಮತಗಳಿಂದ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್‌ನ ಗಾಂಧಿನಗರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಬಹುತೇಕ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 24, ಬಿಜೆಪಿ 17, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ಭೋಪಾಲ್‌ನಲ್ಲಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ 40,000 ಮತಗಳ ಮುನ್ನಡೆ. ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಎದುರು ರಾಹುಲ್ ಗಾಂಧಿ 4,000ಕ್ಕೂ ಅಧಿಕ ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಆದರೆ ವಯನಾಡಲ್ಲಿ 1,20,000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ದೆಹಲಿಯ ಎಲ್ಲ 7 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕ್ಲೀನ್ ಸ್ವೀಪ್ ಮಾಡಿದೆ.

ಪಶ್ಚಿಮ ಬಂಗಾಳದ ಅಸನ್‌ಸೋಲ್‌ ಕ್ಷೇತ್ರದಲ್ಲಿ ಬಿಜೆಪಿಯ ಬಾಬುಲ್ ಸುಪ್ರಿಯೊ ಮುನ್ನಡೆ. ಡೈಮಂಡ್ ಹಾರ್ಬರ್‌ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅಳಿಯನಿಗೆ ಹಿನ್ನಡೆ. ಉತ್ತರ ಪ್ರದೇಶದ ಉನ್ನಾವೊ ಕ್ಷೇತ್ರದಲ್ಲಿ ಬಿಜೆಪಿಯ ಸಾಕ್ಷಿ ಮಹಾರಾಜ್‌ಗೆ 20,000 ಮತಗಳ ಮುನ್ನಡೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ 29 ಕ್ಷೇತ್ರಗಳಲ್ಲಿ ಮುನ್ನಡೆ, ಕಾಂಗ್ರೆಸ್-ಆರ್‌ಜೆಡಿ 9 ಸೀಟುಗಳಲ್ಲಿ ಮುನ್ನಡೆಯಗೈದೆ.

ಕೇರಳದಲ್ಲಿ ಯುಡಿಎಫ್‌ ಮುನ್ನಡೆ. ತಮಿಳುನಾಡಿನ 29 ಕ್ಷೇತ್ರಗಳಲ್ಲಿ ಡಿಎಂಕೆ ಮುನ್ನಡೆ. ಟ್ರೆಂಡ್‌ ಪ್ರಕಾರ, ತೆಲಂಗಾಣದಲ್ಲಿ ಟಿಆರ್‌ಎಸ್‌ ಹೆಚ್ಚು ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್‌ ಬಹುಮತ ಸಾಧಿಸಿದ್ದು, ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಭಾರೀ ಮುಖಭಂಗವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ