ಮಂಡ್ಯ: ಲೋಕಸಭಾ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಈ ನಡುವೆ ಭಾರೀ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಅವರನ್ನು ಹೊರತುಪಡಿಸಿ ಕಣಕ್ಕಿಳಿದಿದ್ದ ಸುಮಲತಾ ಹೆಸರಿನ ಅಭ್ಯರ್ಥಿಗಳು ಆರಂಭಿಕ ಸುತ್ತುಗಳಲ್ಲಿ ಸುಮಾರು 1,210 ಮತಗಳನ್ನು ಪಡೆದಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೂ ಮಂಡ್ಯ ಕ್ಷೇತ್ರ ಭಾರೀ ಸುದ್ದಿಯಲ್ಲಿದೆ. ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಅಭ್ಯರ್ಥಿಗಳ ಹೆಸರಿನಲ್ಲೇ ಭಾರೀ ರಾಜಕೀಯ ನಡೆದಿತ್ತು. ಅದರಲ್ಲೂ ಸುಮಲತಾ ಅಂಬರೀಶ್ ಹೊರತುಪಡಿಸಿ ಸುಮಲತಾ ಹೆಸರಿರುವ ಇತರೇ 3 ಮಂದಿ ಅಭ್ಯರ್ಥಿಗಳು ಕೂಡ ಸಖತ್ ಸುದ್ದಿಯಾಗಿದ್ದರು. ಸದ್ಯ ಈವರೆಗೆ ನಡೆದಿರುವ ಮತ ಏಣಿಕೆಯಲ್ಲಿ 32,183 ಮತಗಳನ್ನು ನಿಖಿಲ್ ಕುಮಾರಸ್ವಾಮಿ ಗಳಿಸಿದ್ದರೆ ಸುಮಲತಾ ಅಂಬರೀಶ್ 30,311 ಮತಗಳನ್ನು ಪಡೆದಿದ್ದಾರೆ. ಅಲ್ಲದೆ 1,872 ಮತಗಳ ಅಂತರದಿಂದ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಾಗೆಯೇ ಉಳಿದ ಮೂವರು ಸುಮಲತಾ ಹೆಸರಿನ ಅಭ್ಯರ್ಥಿಗಳು ಒಟ್ಟು 1,210 ಮತಗಳನ್ನು ಪಡೆದಿದ್ದಾರೆ. ಕ್ರ.ಸಂ19- ಸುಮಲತ 549, ಕ್ರ.ಸಂ21- ಎಂ.ಸುಮಲತ 478, ಕ್ರ.ಸಂ22- ಸುಮಲತಾ 183 ಮತ ಗಳಿಸಿದ್ದಾರೆ.
ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿತ್ತು. ಈ ಇಬ್ಬರು ಅಭ್ಯರ್ಥಿಗಳ ನಡುವೆ ಪ್ರಚಾರದ ವೇಳೆ ಹಾಗೂ ಮತದಾನದ ವೇಳೆ ನಡೆದ ಸಣ್ಣ ಗಲಾಟೆ, ಪರ ವಿರೋಧ ಹೇಳಿಕೆಗಳಿಂದಲೇ ಮಂಡ್ಯ ಅಖಾಡ ಹೆಚ್ಚು ಸದ್ದು ಮಾಡಿತ್ತು.